ಮಂಗಳೂರು: ದೆಹಲಿಯ ರಾಷ್ಟ್ರೀಯ ಹಸಿರು ಪೀಠದಲ್ಲಿ ಸೆ. 21ರಂದು ನೇತ್ರಾವತಿ ನದಿ ತಿರುವು ಯೋಜನೆ ಕುರಿತು ವಿರುದ್ಧವಾಗಿ ತೀರ್ಪು ಬರಲೆಂದು ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಸದಸ್ಯರು ನಗರದ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಆರಂಭದಲ್ಲಿ ಕದ್ರಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲೆಯವರು ಶಾಂತ ಸ್ವಭಾವದವರು. ಈವರೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸರ್ಕಾರ ಇದನ್ನು ಅರ್ಥಮಾಡಿಕೊಂಡಿಲ್ಲ. ಸರ್ಕಾರ ಕಿವಿಗೊಡದೆ ಹೋದಾಗ ದೇವರ ಮೊರೆ ಹೋಗುತ್ತಿದ್ದೇವೆ. ದೇವರೇ ಅಂತಿಮ ನಿರ್ಣಾಯಕರು. ದೇವರು ಖಂಡಿತ ಕರಾವಳಿ ಜಿಲ್ಲೆಯ ಜನರ ಪರವಾಗಿ ತೀರ್ಪು ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ, ಎತ್ತಿನಹೊಳೆ ಯೋಜನೆಯ ವಿರುದ್ಧ. ಕರಾವಳಿ ಜನರಿಗೆ ಅನ್ಯಾಯವೆಸಗುವ ಯೋಜನೆಯನ್ನು ಹಿಂದಕ್ಕೆ ಪಡೆಯುವ ಮನಸ್ಸನ್ನು ಮುಖ್ಯಮಂತ್ರಿಯವರಿಗೆ ಹಾಗೂ ಜಿಲ್ಲೆಯ ಸಚಿವರು, ಶಾಸಕರಿಗೆ ಭಗವಂತ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ, ಚೆನ್ನೈ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಪ್ರಮುಖ ಪೀಠ)ಕ್ಕೆ ವರ್ಗಾಯಿಸುವಲ್ಲಿ ಸಫಲರಾಗಿದ್ದೇವೆ. ಅಲ್ಲಿಂದ ಧನಾತ್ಮಕ ತೀರ್ಪಿನ ನಂಬಿಕೆ ಇದೆ ಎಂದರು.
ನೇತ್ರಾವತಿ ನದಿ ತಿರುವು ಯೋಜನೆಯನ್ನು ಕೈಗೆತ್ತಿಕೊಂಡಿದ್ದರಿಂದ ಈಗಾಗಲೇ ಪಶ್ಚಿಮ ಘಟ್ಟದಲ್ಲಿ ಅನೇಕ ಮರಗಳು ಧರೆಗುರುಳಿವೆ. ಇದರಿಂದ ಈ ವರ್ಷ ಮಳೆಯ ಪ್ರಮಾಣ ಕೂಡಾ ಕಡಿಮೆಯಾಗಿದೆ. ಇನ್ನು ಈ ಯೋಜನೆ ಮುಂದುವರಿಸಲು ಅವಕಾಶ ನೀಡಿದರೆ ಮುಂದಿನ ಪೀಳಿಗೆ ಅಪಾಯವನ್ನೆದುರಿಸುವುದಲ್ಲಿ ಸಂಶಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮಂಗಳಾದೇವಿ, ಗೋಕರ್ಣನಾಥೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಮಿಲಾಗ್ರಿಸ್ ಚರ್ಚ್‍ನಲ್ಲಿ ಫಾದರ್ ವಲೇರಿಯನ್ ಪ್ರಾರ್ಥನೆ ನೆರವೇರಿಸಿದರು. ಮಾಜಿ ಶಾಸಕ ಎನ್.ಯೋಗೀಶ್ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ನ್ಯಾಯವಾದಿ ದಿನಕರ್ ಶೆಟ್ಟಿ ಸೇರಿ ಹಲವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English