ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಇಂದು ನಗರದ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿವಾದ ಕೋರ್ಟ್ ಮುಂದೆ ಇರುವುದರಿಂದ ಪ್ರಧಾನಿ ಮಧ್ಯ ಪ್ರವೇಶ ಪ್ರಯೋಜನ ಸಾಧ್ಯವಿಲ್ಲ ಎಂದರು.
ರಾಜಕೀಯ ಕಾರಣದಿಂದ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಕಾವೇರಿ ವಿಷಯದಲ್ಲಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸುವುದರಲ್ಲಿ ಅರ್ಥವಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಸರ್ಕಾರ ತಾನೇ ಹಗ್ಗ ಕೊಟ್ಟು ನ್ಯಾಯಾಂಗದಿಂದ ಕೈ ಕಟ್ಟಿಸಿಕೊಂಡಿದೆ. 10 ಸಾವಿರ ಕ್ಯೂಸೆಕ್ ನೀರು ಬಿಡುವ ಪ್ರಮಾಣಪತ್ರ ಸಲ್ಲಿಸಿ, ಕಾನೂನು ಸುವ್ಯವಸ್ಥೆ ವಿಷಯ ಪ್ರಸ್ತಾಪಿಸಿ ಸರ್ಕಾರ ಛೀಮಾರಿ ಹಾಕಿಸಿಕೊಂಡಿದೆ. ವಿಷಯಾಂತರ ಮಾಡೋದಕ್ಕೆ ಪ್ರಧಾನಿ ಮಧ್ಯ ಪ್ರವೇಶದ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ದೂರಿದರು.
ಸಿಎಂ ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ರಾಜ್ಯದ ಪರ ವಕೀಲ ಮೋಹನ್ ಕಾತರ್ಕಿ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಪ್ರಧಾನಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಆದರೆ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದರು.
ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣಾ ಮೈತ್ರಿ ವಿಷಯದಲ್ಲಿ ನಾನು ಯಾರೊಂದಿಗೂ ಮಾತನಾಡಿಲ್ಲ. ನಮ್ಮ ಪಕ್ಷದ ಬೆಂಗಳೂರು ನಾಯಕರು ಮಾತುಕತೆ ನಡೆಸಿದ್ದಾರೆ. ಮೇಯರ್ ಸ್ಥಾನ ಬಿಟ್ಟುಕೊಡುವುದಕ್ಕೆ ನಮ್ಮ ಪಕ್ಷ ಸಿದ್ಧವಿಲ್ಲ. ಈ ವಿಷಯ ನಮ್ಮ ಪಕ್ಷದ ಎಲ್ಲ ಪ್ರಮುಖರಿಗೂ ಸ್ಪಷ್ಟವಾಗಿದೆ ಎಂದು ಕುಮಾರಸ್ವಾಮಿಗೆ ಯಡಿಯೂರಪ್ಪ ಟಾಂಗ್ ನೀಡಿದರು.
Click this button or press Ctrl+G to toggle between Kannada and English