ಮಂಗಳೂರು: ಪಕ್ಷದೊಳಗೆ ಇದ್ದುಕೊಂಡೇ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವ ಜನಾರ್ದನ ಪೂಜಾರಿಯವರ ವೈಖರಿ ಕೆಲವರಲ್ಲಿ ಇರಿಸು ಮುರಿಸು ಉಂಟುಮಾಡಿದರೆ, ಇನ್ನು ಕೆಲವರಲ್ಲಿ ಕುಟುಂಬದಲ್ಲಿ ಹಿರಿಯಣ್ಣನಿಗೆ ನೀಡಿದ ಗೌರವ, ನೇರ ನಡೆ, ಪಾರದರ್ಶಕ ನಿಲುವಿಗೆ ಹೆಸರಾದ ಪೂಜಾರಿ ಪಕ್ಷದ ಶಿಸ್ತಿನ ಸಿಪಾಯಿ.
ಆದರೆ ಎಲ್ಲವನ್ನೂ ತನಗೆ ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಇದೆ ಎಂಬ ಅವರ ಮನದಾಳದ ಭಾವವನ್ನು ಅಕ್ಷರ ರೂಪಕ್ಕಿಳಿಸು ಜನಾರ್ದನ ಪೂಜಾರಿ ಸಿದ್ದರಾಗುತ್ತಿದ್ದಾರೆ. ಹೌದು, ಕೆಲವೇ ದಿನಗಳಲ್ಲಿ ಪೂಜಾರಿಯವರ ಆತ್ಮಚರಿತ್ರೆ ಹೊರಬರಲಿದೆ.
ಎಲ್ಲವನ್ನೂ ಕಡ್ಡಿಮುರಿದಂತೆ ಹೇಳುವ ಪೂಜಾರಿಯವರಿಗೆ ಇನ್ನೇನು ಹೇಳಲು ಬಾಕಿ ಇದೆ ಎಂದು ಮೂಗು ಮುರಿಯಬೇಕಿಲ್ಲ. ರಾಜಕಾರಣವೆಂದರೆ ಸಾಗರದಂತೆ. ಅದರಲ್ಲೂ ಜನಾರ್ದನ ಪೂಜಾರಿಯವರು ಕಾಂಗ್ರೆಸ್ ಪಕ್ಷದಲ್ಲಿ ಅಲಂಕರಿಸಿದ ಸ್ಥಾನಮಾನಗಳು ಒಂದೆರಡಲ್ಲ. ಗೆಲುವಿನ ಸರದಾರರಾಗಿದ್ದ ಪೂಜಾರಿ ಸೋಲನ್ನೂ ಸಾಲು ಸಾಲು ಕಂಡವರು. ಸವಾಲುಗಳನ್ನು ಎದುರಿಸಿದವರು. ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದವರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದೊಳಗೆ ಶಿಸ್ತು ಕಾಯ್ದುಕೊಂಡವರು. ಎಷ್ಟು ಗೆಳೆಯರನ್ನು ಸಂಪಾದಿಸಿಕೊಂಡರೂ, ಅಷ್ಟೇ ಶತ್ರುಗಳನ್ನೂ ಹೊಂದಿದವರು. ಹೇಳಿಕೊಳ್ಳಲು ಈಗ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನವಿಲ್ಲದಿದ್ದರೂ ಅವರ ತೂಕದ ಹೇಳಿಕೆ ಮಾತ್ರ ಪತ್ರಿಕೆಯ ಪ್ರಮುಖ ಪುಟದಲ್ಲಿ ರಾರಾಜಿಸುತ್ತಿದ್ದವು.
ಸ್ಥಳೀಯಾಡಳಿತದ ಚುನಾವಣೆಯಿಂದ ಹಿಡಿದು ಎಲ್ಲಾ ಚುನಾವಣೆಗಳಲ್ಲೂ ತನ್ನ ವಯಸ್ಸನ್ನೂ (ಅವರಿಗೀಗ 80 ವರ್ಷ) ಲೆಕ್ಕಿಸದೆ ಹಗಲಿರುಳು ದುಡಿದಿದ್ದಾರೆ. ಪಕ್ಷದೊಳಗಿನ ರಾಜಕೀಯಕ್ಕೆ ನೊಂದು, ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅವರು ಕೈಗೊಂಡ ನಿರ್ಧಾರಗಳು, ಯೋಜನೆಗಳು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯುವಂಥದ್ದು. ಹೆಂಗಳೆಯರಿಂದಲೇ ಅದರಲ್ಲೂ ಕೆಳವರ್ಗದ ಮಹಿಳೆಯರನ್ನು ಅರ್ಚಕರನ್ನಾಗಿಸಿದ್ದು, ವಿಧವೆಯರಿಗೂ ಮುತ್ತೈದೆ ಭಾಗ್ಯ ಕಲ್ಪಿಸಿದ್ದು ಅವರ ದೂರದೃಷ್ಟಿ ಹಾಗೂ ಕ್ರಾಂತಿಕಾರಿ ಮನೋಭಾವನೆಗೆ ಸಾಕ್ಷಿಯಾಗಿವೆ.
ಕಳೆದ ಎರಡು ವರ್ಷಗಳ ಹಿಂದೆಯೇ ಪೂಜಾರಿ ಆತ್ಮಚರಿತ್ರೆ ಬರೆಯುವ ಯೋಚನೆ ಮಾಡಿದ್ದರು. ಆದರೆ ಅದನ್ನು ಕಾರ್ಯರೂಪಕ್ಕಿಳಿಸಿದ್ದು ಕಳೆದ ಒಂದು ವರ್ಷದಿಂದ. ಈಗಾಗಲೇ 150 ಪುಟಗಳನ್ನು ಬರೆದು ಮುಗಿಸಿರುವ ಪೂಜಾರಿಯವರು 300 ಪುಟಗಳಿಗೆ ವಿಸ್ತರಿಸಿ ಆದಷ್ಟು ಬೇಗ ಬಿಡುಗಡೆಗೊಳಿಸಬೇಕೆಂದಿದ್ದಾರೆ.
ಅವರಿಗೆ ಕಾರ್ಯಕ್ರಮದಲ್ಲಿರುವಾಗ, ಪ್ರಯಾಣದಲ್ಲಿರುವಾಗ, ಗೆಳೆಯರ ಜೊತೆಯಿರುವಾಗ, ಇನ್ನೇನನ್ನೋ ಓದುತ್ತಿರುವಾಗ ನೆನಪಿನ ಬುತ್ತಿ ತೆರೆದುಕೊಳ್ಳುತ್ತವೆ. ತಕ್ಷಣ ಅದನ್ನು ನೋಟ್ ಮಾಡಿಕೊಂಡು, ರಾತ್ರಿ ಬರವಣಿಗೆಗಿಳಿಸುತ್ತಾರೆ.
ಆತ್ಮಚರಿತ್ರೆಯಲ್ಲಿ ಏನೇನಿದೆ?
ಬಾಲ್ಯದಿಂದ ಹಿಡಿದು ನ್ಯಾಯವಾದಿ, ಕಾಂಗ್ರೆಸ್ ನೇತಾರ, ಸಾಮಾಜಿಕ ಕಾರ್ಯಕರ್ತನಾಗಿ ಅನುಭವಿಸಿದ ಕಷ್ಟ-ನಷ್ಟಗಳು, ಸೋಲು-ಗೆಲುವುಗಳ ತಿರುವುಗಳು ಎಲ್ಲವನ್ನೂ ಬಿಚ್ಚಿಡುತ್ತಿದ್ದಾರಂತೆ. ಇಂದಿರಾಗಾಂಧಿಯವರಿಂದ ಹಿಡಿದು ರಾಹುಲ್‍ಗಾಂಧಿವರೆಗೆ ಆ ಕುಟುಂಬದೊಂದಿಗಿನ ಒಡನಾಟ, ಬೋಫೋರ್ಸ್ ವಿವಾದದ ವೇಳೆ ಲೋಕಸಭೆಯಲ್ಲಿ ಮೊದಲ ವ್ಯಕ್ತಿಯಾಗಿ ಮಾತನಾಡಿದ್ದು, ಅಯೋಧ್ಯಾ ವಿವಾದ ಸಂದರ್ಭ ಪ್ರಧಾನಿಯಾಗಿದ್ದ ನರಸಿಂಹ ರಾವ್‍ರವನ್ನು ತರಾಟೆಗೆ ತೆಗೆದುಕೊಂಡದ್ದು, ವಿಶ್ವಸಂಸ್ಥೆ, ವಿದೇಶಾಂಗ ನೀತಿ, ಮದರ್ ತೆರೆಸಾ ನಂಟು ಇತ್ಯಾದಿ ಮಹತ್ವದ ಸಂಗತಿಗಳ ಉಲ್ಲೇಖವಿದೆ ಎನ್ನಲಾಗಿದೆ.
ಕಾಂಗ್ರೆಸ್‍ನಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆಯುವ ಚಿಂತನೆಗಳು, ಹೈಕಮಾಂಡ್ ಆಪ್ತರ ಮೂಲಕ ಸಂಪರ್ಕಿಸುವ ಬಗೆ ಎಲ್ಲದರ ಮಾಹಿತಿಯಿದೆ. ಆತ್ಮಸಾಕ್ಷಿಗೆ ಬೆಲೆ ಕೊಡುವ ನಾನು ಆತ್ಮಚರಿತ್ರೆಯಲ್ಲಿ ಸತ್ಯವನ್ನೇ ನುಡಿದಿದ್ದೇನೆ ಎಂದಿದ್ದಾರೆ. ಆತ್ಮಚರಿತ್ರೆ ಎನ್ನುವುದು ಹೊಳೆಯುವ ಕನ್ನಡಿಯಂತಿರಬೇಕು ಎಂದು ನಂಬಿದವರು ಪೂಜಾರಿ.
ಆತ್ಮಚರಿತ್ರೆ ಕನ್ನಡದಲ್ಲಿದೆ. ನಂತರ ಇಂಗ್ಲಿಷ್‍ಗೆ ಭಾಷಾಂತರಗೊಳ್ಳಲಿದೆ. ಈಗಾಗಲೇ ಕೆಲವು ಪ್ರಮುಖ ರಾಜಕಾರಣಿಗಳು ಆತ್ಮಚರಿತ್ರೆಗಳನ್ನು ಬರೆದಿದ್ದಾರೆ. ಈ ಎಲ್ಲಾ ಆತ್ಮಚರಿತ್ರೆಗಳಲ್ಲಿ ಹೊರಜಗತ್ತಿಗೆ ತಿಳಿಯದ ಅನೇಕ ಸತ್ಯಗಳು ಸ್ಫೋಟಗೊಂಡಿವೆ. ಇನ್ನು ಪೂಜಾರಿಯವರ ಆತ್ಮಚರಿತ್ರೆ ಅದೆಷ್ಟು ಹೃದಯಗಳನ್ನು ತಲ್ಲಣಗೊಳಿ ಸುತ್ತದೆಯೋ, ಅದೆಷ್ಟು ಕುತೂಹಲಗಳನ್ನು ಹೊರಹಾಕಲಿದೆಯೋ ಎಂಬುವುದು ಕಾದುನೋಡಬೇಕು.
Click this button or press Ctrl+G to toggle between Kannada and English