ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರದ ವತಿಯಿಂದ ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ನಡೆದ ಗುರು ಜಯಂತಿಯನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಓರ್ವ ದಾರ್ಶನಿಕನಾಗಿ ಸಾಮಾಜಿಕ ಸುಧಾರಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ನಿರ್ವಹಿಸಿದ ಪಾತ್ರ ಅತಿ ಪ್ರಮುಖವಾದುದು. ಎಲ್ಲರಿಗೂ ಸುಶಿಕ್ಷಿತ ಶಿಕ್ಷಣ ದೊರೆಯಬೇಕು. ಆಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದರು.
ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಪ್ರೊ. ಎಂ.ಎಸ್.ಕೋಟ್ಯಾನ್ ಅವರು ನಾರಾಯಣ ಗುರುಗಳ ಕುರಿತಾಗಿ ಉಪನ್ಯಾಸ ನೀಡಿದರು. ಇದೇ ಸಂದರ್ಭ ಮುದ್ದು ಮೂಡುಬೆಳ್ಳೆ ನಿರ್ದೇಶನದಲ್ಲಿ ತಯಾರಿಸಲಾದ ನಾರಾಯಣಗುರುಗಳ ಜೀವನ ಸಾಧನೆ ಹಾಗೂ ಸಂದೇಶಗಳನ್ನು ಒಳಗೊಂಡ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುದ್ರೋಳಿ ಕ್ಷೇತ್ರದ ವಕ್ತಾರ ಹರಿಕೃಷ್ಣ ಬಂಟ್ವಾಳ, ಶಾಲಾ ಕಾಲೇಜುಗಳಲ್ಲಿ ನಾರಾಯಣ ಗುರುಗಳ ಕುರಿತಂತೆ ಪಠ್ಯಪುಸ್ತಕ ಅಳವಡಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು. ಶಾಸಕ ಜೆ.ಆರ್.ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಾಸಕ ಬಿ.ಎ.ಮೊಯ್ದೀನ್ ಬಾವಾ, ಮೇಯರ್ ಹರಿನಾಥ್, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ, ಆಯುಕ್ತ ಮುಹಮ್ಮದ್ ನಝೀರ್, ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಕಸಾಪ ದ.ಕ.ಜಿಲ್ಲಾಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ರಾಘವೇಂದ್ರ ಕೂಳೂರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English