ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಂತಹ ವಿವಿಯ ಹೆಸರನ್ನು ಮತೀಯ ಶಕ್ತಿಗಳು ಹಾಳು ಮಾಡುತ್ತಿವೆ. ಇದನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಮಂಗಳೂರು ವಿವಿಯ 37ನೇ ಸಂಸ್ಥಾಪನಾ ದಿನಾಚರಣೆಯನ್ನು ಮಂಗಳ ಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿದ ಅವರು, ಕೋಮು ಸಂಘಟನೆಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ವಿವಿಯಲ್ಲಿ ಕೋಮು, ಭಾಷೆ, ಧರ್ಮದ ಹೆಸರಿನಲ್ಲಿ ಅಹಿತಕರ ಕೆಲಸ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕೋಮುವಾದಿ ಶಕ್ತಿಗಳು ಸಾಮಾಜಿಕ ಮೌಲ್ಯವನ್ನು ಹಾಳು ಮಾಡುತ್ತಿವೆ. ಕೋಮುವಾದಿ ಶಕ್ತಿಗಳನ್ನು ವಿದ್ಯಾರ್ಥಿಗಳು ಖಂಡಿಸಬೇಕು. ಕೋಮುವಾದಿ ಸಂಘಟನೆಗಳೊಂದಿಗೆ ಕೈಜೋಡಿಸಬಾರದು ಎಂದರು.
ಮಂಗಳೂರು ವಿವಿ ಅತ್ಯಂತ ಗುಣಮಟ್ಟದ ಮತ್ತು ಪರಿಣಾಮಕಾರಿ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ವಿವಿಯ ಉಪನ್ಯಾಸಕರು, ವಿದ್ಯಾರ್ಥಿಗಳು, ಇಲ್ಲಿನ ಸಾರ್ವಜನಿಕರ ಸೇವೆಯಿಂದ ವಿವಿಯು ನ್ಯಾಕ್ ನಿಂದ ಎ ಗ್ರೇಡ್ ಪಡೆಯಲು ಸಾಧ್ಯವಾಗಿದೆ. ವಿವಿಯ ಸಂಶೋಧನಾ ಕೇಂದ್ರ ವಿಶ್ವ ದರ್ಜೆಯನ್ನು ಹೊಂದಿದೆ. ಇಲ್ಲಿ ಎಲ್ಲರೂ ಸೇರಿ ಒಳ್ಳೆಯ ವಿವಿಯಾಗಿ ರೂಪಿಸಿದ್ದಾರೆ. ಯಾವುದೇ ಕಾರಣಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಗಳ ಕುಸಿತ ಆಗಬಾರದು. ಗುಣಮಟ್ಟದ ಶಿಕ್ಷಣಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ವಿವಿ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಜಾಮೀನು ರದ್ದುಪಡಿಸಲು ಮೇಲ್ಮನವಿ ಸಲ್ಲಿಸಿ ಆರೋಪಿಗೆ ತಕ್ಕ ಪಾಠ ಕಲಿಸಬೇಕು. ಆತನನ್ನು ವಿವಿಯಿಂದ ಅಮಾನತು ಮಾಡಿರುವುದು ಉತ್ತಮ ಕೆಲಸವೆಂದು ರಾಯರೆಡ್ಡಿ ಹೇಳಿದರು.
ಈ ಸಂದರ್ಭ ತುಳು ಚಲನಚಿತ್ರ ನಟ ದೇವದಾಸ್ ಕಾಪಿಕಾಡ್, ಒಲಿಂಪಿಯನ್ ಸಹನಾ ಕುಮಾರಿ ರವರನ್ನು ಸನ್ಮಾನಿಸಲಾಯಿತು. ಸಚಿವ ಯು.ಟಿ. ಖಾದರ್, ಕುಲಸಚಿವ ಪ್ರೊ. ಕೆ. ಎಂ ಲೋಕೇಶ್, ಮೌಲ್ಯಮಾಪನ ರಿಜಿಸ್ಟ್ರಾರ್ ಎ.ಎಂ. ಖಾನ್, ಹಣಕಾಸು ಅಧಿಕಾರಿ ಶ್ರೀಪತಿ ಕಲ್ಲೂರಾಯ, ಕುಲಸಚಿವ ಪ್ರೊ. ಕೆ.ಎಂ ಲೋಕೇಶ್, ಎ.ಎಂ ಖಾನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English