ಆಳ್ವಾಸ್‌‌ಗೆ ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಭೇಟಿ

4:25 PM, Tuesday, September 20th, 2016
Share
1 Star2 Stars3 Stars4 Stars5 Stars
(No Ratings Yet)
Loading...

p-b-acharyaಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ಗೆ ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಭೇಟಿ ನೀಡಿದರು.

ಅಳ್ವಾಸ್ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕಥಕ್, ಯಕ್ಷಗಾನ ನೃತ್ಯ ವೈಭವ, ಮಲ್ಲಕಂಬ, ಪುರುಲಿಯಾ ಜಾವೋ, ಶ್ರೀಲಂಕಾದ ಜನಪದ ನೃತ್ಯ, ಸ್ಟಿಕ್ ಡ್ಯಾನ್ಸ್, ಡೋಲ್ ಚಲೋ, ಬಂಜಾರ ಸಹಿತ ದೇಶದ ವಿವಿಧ ನೃತ್ಯ ಪ್ರಕಾರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ವೈವಿಧ್ಯದ ಬಳಿಕ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳು ಜ್ಞಾನವನ್ನು ನೀಡುತ್ತದೆ. ಆದರೆ ಅದು ನಿಜಾರ್ಥದಲ್ಲಿ ಉಪಯೋಗವಾಗುವುದು ವಿದ್ಯಾರ್ಥಿಗಳು ಜ್ಞಾನವನ್ನು ಸಾಮಾಜಿಕ ಕಳಕಳಿಗೆ ಉಪಯೋಗಿಸಿದಾಗ. ಮೋದಿ ಸರ್ಕಾರವು ಜನಧನ್‌ನಂತಹ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದು, ವಿದ್ಯಾರ್ಥಿಗಳು ಹಳ್ಳಿ-ಹಳ್ಳಿಗೆ ತೆರಳಿ ಜನರಿಗೆ ಈ ಕುರಿತು ಮಾಹಿತಿ ನೀಡಬೇಕು. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಮಾಡಬೇಕು ಎಂದರು.

ನಮ್ಮ ಜ್ಞಾನ ವೈಯಕ್ತಿಕವಾಗಿ ಮಾತ್ರವಲ್ಲದೆ ನಮ್ಮ ಕುಟುಂಬ, ಸಮಾಜ, ರಾಜ್ಯ, ದೇಶವನ್ನು ಬಲಿಷ್ಠವಾಗಿ ಕಟ್ಟಲು ವಿನಿಯೋಗವಾಗಬೇಕು. ಅಭಿವೃದ್ಧಿಯ ಜೊತೆಗೆ ಭಾರತೀಯ ಪರಂಪರೆಯೊಂದಿಗೆ ಯುವಜನರು ಮುನ್ನಡೆದರೆ ದೇಶ ಬಲಿಷ್ಠವಾಗುವುದರಲ್ಲಿ ಸಂಶಯವಿಲ್ಲ. ಈಶಾನ್ಯ ಭಾರತ ಗಡಿ ಸಮಸ್ಯೆಯಂತಹ ಹಲವರು ಸಮಸ್ಯೆಗಳಿಂದ ಬಳಲುತ್ತಿದೆ. ದೇಶದ ಇತರ ರಾಜ್ಯಗಳು ಈಶಾನ್ಯ ರಾಜ್ಯಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪಿ.ಬಿ. ಆಚಾರ್ಯ-ಕವಿತಾ ಆಚಾರ್ಯ ದಂಪತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಗೌರವಿಸಿದರು. ಬಳಿಕ ಮಾತನಾಡಿದ ಅವರು ಈಗಾಗಲೇ 750 ಮಂದಿ ಈಶಾನ್ಯ ಭಾರತದಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲಿಯ ಕಲಾ ಪ್ರಕಾರಗಳನ್ನು ಕೂಡ ನಮ್ಮ ಸಾಂಸ್ಕೃತಿಕ ತಂಡದಲ್ಲಿ ಅಳವಡಿಸಿದ್ದೇವೆ. ಈಶಾನ್ಯ ಭಾರತದ ರಾಜ್ಯವಾದ ನಾಗಲ್ಯಾಂಡ್‌ಗೆ ತೆರಳಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾದ ವಿನಿಮಯಕ್ಕೆ ಮಾತುಕತೆ ನಡೆಸಲಾಗುವುದು. ವಿವಿಧ ಕ್ಷೇತ್ರದಲ್ಲಿ ತೊಡಗಿರುವ ಅಲ್ಲಿನ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ದತ್ತು ಸ್ವೀಕಾರ ಯೋಜನೆಯಡಿ ಶಿಕ್ಷಣ ನೀಡಲಾಗುವುದು ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English