ಮದರ್ ತೆರೆಸಾ ಚಲನಚಿತ್ರೋತ್ಸವಕ್ಕೆ ಚಾಲನೆ

4:36 PM, Tuesday, September 20th, 2016
Share
1 Star2 Stars3 Stars4 Stars5 Stars
(No Ratings Yet)
Loading...

mother-theresaಮಂಗಳೂರು: ಮದರ್ ತೆರೆಸಾರಿಗೆ ಸಂತ ಪದವಿ ನೀಡಿದ ಹಿನ್ನೆಲೆಯಲ್ಲಿ ನಗರದ ವಿವಿಧ ಕಡೆ ಹಮ್ಮಿಕೊಳ್ಳಲಾಗಿರುವ ಮದರ್ ತೆರೆಸಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯಲ್ಲಿ ಚಾಲನೆ ದೊರೆತಿದೆ.

ಚಲನಚಿತ್ರೋತ್ಸವ ಉದ್ಘಾಟಿಸಿದ ಭಾರತೀಯ ಮೂಲದ ಲಂಡನ್ ನಿವಾಸಿ ಗೌತಂ ಲೂಯಿಸ್, ನನ್ನ ಹೊಸ ಜೀವನಕ್ಕೆ ಅವಕಾಶ ಕಲ್ಪಿಸಿದ ಕೋಲ್ಕತ್ತಾದ ಮಿಶಿನರೀಸ್ ಆಫ್ ಚಾರಿಟಿಯ ಮಹಾಮಾತೆ, ಮದರ್ ತೆರೆಸಾ ನನ್ನ ಎರಡನೇ ತಾಯಿ ಎಂದರು.

ನನ್ನ ಜೀವನಕ್ಕೊಂದು ಹೊಸ ದಾರಿ ನೀಡಿದ ಮದರ್ ತೆರೆಸಾ ಅವರನ್ನು 7ರ ಹರೆಯದಲ್ಲೇ ಕೋಲ್ಕತ್ತಾದಿಂದ ಲಂಡನ್‌ಗೆ ತೆರಳಿದ್ದ ನಾನು ಮತ್ತೆ ಭೇಟಿಯಾಗಿದ್ದು 1996ರಲ್ಲಿ. ಇದೀಗ ಸಂತ ಪದವಿ ಪಡೆದ ಮದರ್ ತೆರೆಸಾ ಕುರಿತು, ಭಾರತದಲ್ಲಿ ಹುಟ್ಟಿ ಬೆಳೆದ ನನಗೂ ಒಂದಿಷ್ಟು ಜವಾಬ್ದಾರಿ ಇದೆ ಎಂಬ ನೆಲೆಯಲ್ಲಿ ಮದರ್ ತೆರೆಸಾರ ಸೇವೆಯ ಕುರಿತಾದ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ ಎಂದರು.

ಅದಕ್ಕಾಗಿ 2016ರ ಆಗಸ್ಟ್ 12ರಂದು ಕೋಲ್ಕತ್ತಾಗೆ ಆಗಮಿಸಿ ಚಿತ್ರ ನಿರ್ದೇಶಿಸಿ ಇದೀಗ ದೇಶ, ವಿದೇಶಗಳಲ್ಲಿ ಅವುಗಳನ್ನು ಪ್ರದರ್ಶಿಸುವ ಕಾರ್ಯ ವಿವಿಧ ಸಂಘ-ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ. ಭಾರತದ ವಿವಿಧ ಕಡೆಗಳಲ್ಲಿ ಈಗಾಗಲೇ ಪ್ರದರ್ಶನ ನಡೆಸಲಾಗಿದ್ದು, ಮದರ್ ತೆರೆಸಾರವರು ಭೇಟಿ ನೀಡಿರುವ ಮಂಗಳೂರಿನಲ್ಲೂ ಈ ಚಿತ್ರ ಪ್ರದರ್ಶನಕ್ಕೆ ವಿಶೇಷ ಶಾಲೆಯಲ್ಲಿ ಅವಕಾಶ ನೀಡಿರುವುದು ನನಗೆ ತುಂಬಾ ಸಂತಸ ನೀಡಿದೆ ಎಂದರು.

ಮದರ್ ತೆರೆಸಾ ಅವರ ಭಾವಚಿತ್ರಕ್ಕೆ ವಿಶೇಷ ಮಕ್ಕಳ ಜತೆ ಹೂ ಅರ್ಪಿಸಿ ತಮ್ಮ ಜೀವನದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡ ಅವರು, ಮಕ್ಕಳ ಜತೆಯಲ್ಲೇ ನೆಲದಲ್ಲಿ ಕುಳಿತು ಕೆಲ ಹೊತ್ತು ಸಾಕ್ಷ್ಯ ಚಿತ್ರ ವೀಕ್ಷಿಸಿದರು. ವಿಶೇಷ ಶಾಲೆಯ ಮಕ್ಕಳು ಪ್ರಾರ್ಥಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English