ಮಂಗಳೂರು: ದೇಶ ಪ್ರಗತಿ ಪಥದಲ್ಲಿ ಸಾಗಬೇಕಾದರೆ ದೇಶೀಯ ಆರ್ಥಿಕ ವ್ಯವಸ್ಥೆ ಗಟ್ಟಿಯಾಗಿರಬೇಕು. ದೇಶದ ಅರ್ಥ ವ್ಯವಸ್ಥೆಗೆ ಎಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳ ಕೊಡುಗೆ ಅವಶ್ಯ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿ ಸಂಘವನ್ನು ಅವರು ಸೋಮವಾರ ಉದ್ಘಾಟಿಸಿದರು.
ಜಗತ್ತಿನಲ್ಲಿ ಒಟ್ಟು 16 ದೇಶಗಳು ಟ್ರಿಲಿಯನ್ ಜಿಡಿಪಿ ಕೊಡುತ್ತಿವೆ. ಆ ಪೈಕಿ ಭಾರತವೂ ಒಂದು. ಆದರೆ ಅತೀ ಹೆಚ್ಚಿನ ಜಿಡಿಪಿ ಅಮೆರಿಕ ಮತ್ತು ಚೀನ ದೇಶದ್ದಾಗಿದೆ. ಚೀನ ಜನಸಂಖ್ಯೆಯಲ್ಲಿ ನಮಗಿಂತ ಕಡಿಮೆ ಇದ್ದರೂ ಅವರ ಜಿಡಿಪಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಚೀನಕ್ಕಿಂತ ಮುಂದುವರಿಯಲು ನಮ್ಮ ದೇಶೀಯ ಯುವಕರು ಕಾರ್ಯೋನ್ಮುಖರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ದೇಶದಲ್ಲಿ ಉದ್ದಿಮೆಗಳ ಬೆಳವಣಿಗೆ ಮತ್ತು ಉದ್ದಿಮೆಶೀಲತೆ ಹೆಚ್ಚಾಗಲು ಗುಣಮಟ್ಟದ ಶಿಕ್ಷಣ ಅಗತ್ಯ. ಅಂತಹ ಶಿಕ್ಷಣವನ್ನು ಸಹ್ಯಾದ್ರಿ ಕಾಲೇಜು ನೀಡುತ್ತಿರುವುದು ಶ್ಲಾಘನೀಯ ಎಂದರು.
ಗೌರವ ಅತಿಥಿ ಶಾಸಕ ಬಿ.ಎ. ಮೊದಿನ್ ಬಾವ ಮಾತನಾಡಿ, ಶಿಕ್ಷಣದಿಂದ ಪ್ರಸ್ತುತ ನಾವು ಇತರ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗಿದೆ. ಮುಂದಿನ 10 ವರ್ಷಗಳಲ್ಲಿ ಭಾರತ ಸೂಪರ್ ಪವರ್ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಂಡಾರಿ ಫೌಂಡೇಶನ್‌ನ ಅಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗ ಅರಸುವವರಾಗದೇ, ಉದ್ಯೋಗ ನೀಡುವವರಾಗಬೇಕು ಎಂಬ ನಿಟ್ಟಿನಲ್ಲಿ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.
ಮಂಗಳೂರು ವಿ.ವಿ. ಕುಲಪತಿ ಕೆ. ಭೈರಪ್ಪ, ಇಂಡಿಯಾ ಡಿಡಕ್ಟಿಕ್ಸ್ ಅಸೋಸಿಯೇಶನ್‌ನ ಸಿಇಒ ಆದಿತ್ಯ ಗುಪ್ತಾ ಗೌರವ ಅತಿಥಿಗಳಾಗಿದ್ದರು. ಉಪ ಪ್ರಾಂಶುಪಾಲ ಪ್ರೊ| ಎಸ್.ಎಸ್. ಬಾಲಕೃಷ್ಣ, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ವಿಲ್ಮಾ ಪವಿತ್ರಾ ಪುತ್ರನ್, ಪೂಜಾ, ಅನುಶಾ ಹೆಗ್ಡೆ, ಚಿನ್ಮಯ ಭರಣ್ ಎಂ.ಆರ್., ಲೆನ್ಸನ್ ರಾಯ್ ಸಲ್ಡಾನ, ಪ್ರಣವ್ ಪದವು, ಸಹನಾ ಪಿ., ಜೀತನ್ ಗ್ರಿನಲ್ ರೊಡ್ರಿಗಸ್, ಪ್ರಜ್ವಲ್ ಎಸ್. ಚಂದ್ರ, ನಾಗರಾಜ್ ಕೆ.ಎಂ. ಮೊದಲಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರೊ| ಉಮೇಶ್ ಎಂ. ಭೂಷಿ ಸ್ವಾಗತಿಸಿದರು.
Click this button or press Ctrl+G to toggle between Kannada and English