ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2015ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಶನಿವಾರ ತುಳು ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಡಾ.ಇಂದಿರಾ ಹೆಗ್ಡೆ (ತುಳು ಸಾಹಿತ್ಯ ಮತ್ತು ಸಂಶೋಧನೆ), ಕೋಟಿ ಪರವ (ತುಳು ಜಾನಪದ) ಹಾಗೂ ಬೇತ ಕುಂಞ ಕುಲಾಲ್ (ತುಳು ಯಕ್ಷಗಾನ) ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ 2015ನೇ ಸಾಲಿನ ಗೌರವ ಪ್ರಶಸ್ತಿ ಸ್ವೀಕರಿಸಿದರು.
2015ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯಡಿ ತುಳು ಕಥಾ ವಿಭಾಗದಲ್ಲಿ `ಗುತ್ತುದಿಲ್ಲದ ಜಾಲ್ಡ್’ ಪುಸ್ತಕ ಬರೆದ ವಸಂತಿ ಶೆಟ್ಟಿ ಬ್ರಹ್ಮಾವರ, ಕವನ ವಿಭಾಗದಲ್ಲಿ `ಬೂಳ್ಯ’ ಕವನಕ್ಕಾಗಿ ಚೆನ್ನಪ್ಪ ಅಳಿಕೆ, ನಾಟಕ ವಿಭಾಗದಲ್ಲಿ `ಗಾಲ’ ಕೃತಿ ರಚಿಸಿದ ಶಿಮಂತೂರು ಚಂದ್ರಹಾಸ ಸುವರ್ಣ ಪ್ರಶಸ್ತಿ ಪಡೆದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಬಿ.ರಮಾನಾಥ ರೈ, ತುಳು ಭಾಷೆ ಹಾಗೂ ತುಳುನಾಡಿನ ಹಿರಿಮೆಯನ್ನು ನಮ್ಮ ಹಿರಿಯರು ಈಗಾಗಲೇ ಸಾಕಷ್ಟು ವಿಸ್ತರಿಸುವ ಕಾರ್ಯ ಮಾಡಿದ್ದು, ಯುವ ಜನಾಂಗ ಈ ನಿಟ್ಟಿನಲ್ಲಿ ತಮ್ಮ ಕಾರ್ಯವನ್ನು ಮುಂದುವರಿಸಬೇಕಿದೆ ಎಂದರು.
ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಶಾಸಕಿ ಶಕುಂತಳಾ ಶೆಟ್ಟಿ, ಶಾಸಕ ಜೆ.ಆರ್.ಲೋಬೋ, ಹಿರಿಯ ಸಾಹಿತಿ ಡಿ.ಕೆ. ಚೌಟ, ಜನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡ, ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಸೇರಿ ಹಲವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English