ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಆತ್ಮಹತ್ಯೆ ಪೊಲೀಸರ ದೌರ್ಜನ್ಯದ ವಿರುದ್ಧ ಪ್ರತಿಭಟನೆ

8:25 PM, Tuesday, September 27th, 2016
Share
1 Star2 Stars3 Stars4 Stars5 Stars
(No Ratings Yet)
Loading...

ksrtc protest ಮಂಗಳೂರು :  ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಒಂದನೇ ಘಟಕಕ್ಕೆ ಸೇರಿದ ಮಂಗಳೂರು- ಸುಬ್ರಹ್ಮಣ್ಯ ರೂಟ್‌ನ ಬಸ್ಸಲ್ಲಿ ಚಿಲ್ಲರೆ ಹಣದ ವಿಚಾರಕ್ಕೆ ಸಂಬಂಧಿಸಿ  ಯುವತಿಯೋರ್ವಳು ಮಾಡಿದ ಆರೋಪದಿಂದ ಮನನೊಂದು ಚಲಿಸುತ್ತಿದ್ದ ಬಸ್‌ನಿಂದ ಕುಮಾರಧಾರಾ ನದಿಗೆ ಹಾರಿ ನಿರ್ವಾಹಕ ದೇವದಾಸ್ ಶೆಟ್ಟಿ(41) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಕೆಎಸ್‌ಆರ್‌ಟಿಸಿ ಡಿಪೋ ಮುಂದೆ  ವಿವಿಧ ಸಂಘಟನೆಗಳ  ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರಕರಣದಲ್ಲಿ ಕಡಬ ಠಾಣಾ ಪೊಲೀಸರು ಏಕಪಕ್ಷೀಯವಾಗಿ ವರ್ತಿಸಿದ್ದು, ಯುವತಿಯ ಹೇಳಿಕೆಯನ್ನೇ ಆಧರಿಸಿ ನಿರ್ವಾಹಕರ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ಪೊಲೀಸರು ಥಳಿಸಿದ್ದಾರೆ. ಇಷ್ಟೇ ಅಲ್ಲದೆ ತಮ್ಮ ತಪ್ಪಿಲ್ಲದಿದ್ದರೂ ನಿರ್ವಾಹಕರ ಕಿಸೆಯಲ್ಲಿದ್ದ ಅವರ ಹಣವನ್ನು ಯುವತಿಗೆ ನೀಡಲಾಗಿದೆ. ಇಲ್ಲಿ ಪೊಲೀಸರ ದೌರ್ಜನ್ಯದಿಂದಲೇ ನಿರ್ವಾಹಕ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಮೃತ ದೇವದಾಸ್ ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿತ್ತು. ಲಾಲ್‌ಬಾಗ್ ಪ್ರಧಾನ ಬಸ್ ನಿಲ್ದಾಣದ ಮುಂಭಾಗ ಡಿವೈಎಫ್‌ಐ, ಇಂಟಕ್ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಸಂಘ, ಎಐಟಿಯುಸಿ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .

ksrtc protest ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಚರಿಸುವ ಈ ಬಸ್‌ಗೆ ರವಿವಾರ ಮಂಗಳೂರಿನಲ್ಲಿ ಏರಿದ ಯುವತಿ  ಆಲಂಕಾರಿಗೆ ಟಿಕೆಟ್ ಮಾಡಿದ್ದಳು. ನಿರ್ವಾಹಕ ಚಿಲ್ಲರೆ ಹಿಂದಿರುಗಿಸುವಾಗ ‘ನಾನು 500 ರೂ. ನೋಟು ನೀಡಿದ್ದೆ; ನೀವು ಕೊಟ್ಟ ಹಣ ಕಡಿಮೆಯಿದೆ’ ಎಂದು ತಗಾದೆ ತೆಗೆದಿದ್ದಳು. ಆಲಂಕಾರಿನಲ್ಲಿ ಬಸ್ ಇಳಿಯುವಾಗ ಯುವತಿ ಮತ್ತೆ ತಕರಾರು ತೆಗೆದಿದ್ದು, ಸ್ಥಳೀಯರು ಸೇರಿದ್ದರು. ಕಡಬ ಪೊಲೀಸರಿಗೂ ಮಾಹಿತಿ ಹೋಗಿದ್ದು ಠಾಣೆಗೆ ಬರುವಂತೆ ಸೂಚಿಸಿದ್ದರು.

ಈ ನಡುವೆ ಯುವತಿಯು ತನ್ನ ಸಂಬಂಧಿಕರಿಗೂ ಮೊಬೈಲ್‌ನಲ್ಲಿ ಕರೆ ಮಾಡಿ ಘಟನೆಯ ಕುರಿತು ತಿಳಿಸಿದ್ದಾಳೆ. ಪ್ರಕರಣದ ಗಂಭೀರತೆ ಅರಿತ ನಿರ್ವಾಹಕ ಬಸ್ ಕಡಬ ತಲುಪುವ ವೇಳೆ ಚಾಲಕನಿಗೆ ಬಸ್ ನಿಲ್ಲಿಸುವಂತೆ ಸೂಚಿಸಿ ಯುವತಿಯನ್ನು ಕಡಬ ಪೊಲೀಸ್ ಠಾಣೆಗೆ ಕರೆದೊಯ್ದು ನಡೆದ ಘಟನೆಯ ಕುರಿತು ಪೊಲೀಸರಿಗೆ ತಿಳಿಸಿದರು. ಇದೇ ವೇಳೆಗೆ ಯುವತಿಯ ಸಂಬಂಧಿಕರೂ ಠಾಣೆಗೆ ಆಗಮಿಸಿದ್ದರು. ಪೊಲೀಸರು ಈ ಸಂದರ್ಭ ದೇವದಾಸ್ ಅವರ ಬಟ್ಟೆ ಬಿಚ್ಚಿಸಿ ತಪಾಸಣೆ ಮಾಡಿದ್ದಲ್ಲದೆ ಥಳಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ದೇವದಾಸ್ ಅವರು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದರು.

ಬಸ್ ಕಡಬದಿಂದ ಪ್ರಯಾಣ ಮುಂದುವರಿಸಿ ಸುಬ್ರಹ್ಮಣ್ಯ ಸಮೀಪ ಕುಮಾರಧಾರಾ ನದಿಯ ಸೇತುವೆ ಮೇಲೆ ಸಂಚರಿಸುತ್ತಿದ್ದಂತೆ ದೇವದಾಸ್ ಸೀಟಿ ಊದಿದ್ದಾರೆ. ಚಾಲಕ ಬಸ್ ನಿಧಾನಗೊಳಿಸುತ್ತಿದ್ದಂತೆ ದೇವದಾಸ್ ತುಂಬಿ ಹರಿಯುತ್ತಿದ್ದ ಕುಮಾರಧಾರೆಗೆ ಹಾರಿದರು. ನದಿಗೆ ಹಾರಿದ ದೇವದಾಸ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದ ಸಂದರ್ಭ ಅಲ್ಲೇ ಸ್ನಾನಘಟ್ಟದ ಮೇಲ್ಭಾಗ ತೀರ್ಥಸ್ನಾನ ಮಾಡುತ್ತಿದ್ದ ಪ್ರವಾಸಿ ಭಕ್ತರೊಬ್ಬರು ಮುಳುಗುತ್ತಿದ್ದವನ ಕೈ ಹಿಡಿದು ಮೇಲಕ್ಕೆ ತರುವ ಯತ್ನ ನಡೆಸಿದರು. ಆದರೆ ದೇವದಾಸ್ ಅವರನ್ನು ತಳ್ಳಿದರು. ದಡದಲ್ಲಿದ್ದವರು ಕೂಡ ರಕ್ಷಣೆಗೆ ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಎರಡೂ ಕೈಗಳನ್ನು ಮೇಲಕ್ಕೆತ್ತಿ ಕೈ ಮುಗಿಯುತ್ತ ದೇವದಾಸ್ ನೀರಲ್ಲಿ ಮುಳುಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚಿಲ್ಲರೆ ವಿವಾದ ತಾರಕಕ್ಕೇರಿದಾಗ ದೇವದಾಸ್ ಅವರೇ ಯುವತಿಯನ್ನು ಠಾಣೆಗೆ ಕರೆದೊಯ್ದು ತಮ್ಮ ತಪ್ಪಿಲ್ಲ ಎಂದು ಹೇಳಿದ್ದರೂ ಪೊಲೀಸರು ಏಕಪಕ್ಷೀಯವಾಗಿ ವರ್ತಿಸಿ ಅವರ ಸಾವಿಗೆ ಕಾರಣರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕರರು ಆಗ್ರಹಿಸುತ್ತಿದ್ದಾರೆ.

ಡಿವೈಎಫ್‌ಯ ಮುಖಂಡ ಸುನೀಲ್ ಬಜಾಲ್, ಇಂಟಕ್ ಪ್ರಮುಖ ಶಶಿರಾಜ್ ಅಂಬಟ್, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಪ್ರವೀಣ್ ಹಾಗೂ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English