ಮಂಗಳೂರು ಮಹಾನಗರ ಪಾಲಿಕೆಗೆ ಬಯಲು ಶೌಚಾಲಯ ಮುಕ್ತ ನಗರ ಪ್ರಮಾಣ ಪತ್ರ ಹಸ್ತಾಂತರ

1:22 PM, Thursday, September 29th, 2016
Share
1 Star2 Stars3 Stars4 Stars5 Stars
(No Ratings Yet)
Loading...

clean-cityಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ಬಯಲು ಶೌಚಾಲಯ ಮುಕ್ತ ನಗರವೆಂಬ ಘೋಷಣೆಯ ಪ್ರಮಾಣ ಪತ್ರ ಹಸ್ತಾಂತರಗೊಂಡಿದೆ. ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಸ್ವಚ್ಛ ಭಾರತ ಮಿಷನ್ ವತಿಯಿಂದ ಈ ಪ್ರಮಾಣ ಪತ್ರ ನೀಡಲಾಗುತ್ತಿದೆ.

ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾದ ಸ್ವಚ್ಛ ಭಾರತ ಮಿಶನ್ ಯೋಜನೆಯ ಮುಖ್ಯಸ್ಥ ಅಭಿನವ್ ಯಾದವ್ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ವಿಶೇಷವೆಂದರೆ, ಈ ಪ್ರಮಾಣ ಪತ್ರವನ್ನು ನೀಡಲಾದ ದಿನಾಂಕದಿಂದ ಆರು ತಿಂಗಳ ಕಾಲ ಇದು ಅರ್ಹವಾಗಿರುತ್ತದೆ.

ಬಳಿಕ ಸ್ವಚ್ಛತೆಯ ಮಾನದಂಡಗಳನ್ನು ನಿರ್ವಹಿಸದಿದ್ದಲ್ಲಿ ಪ್ರಮಾಣಪತ್ರ ಅನೂರ್ಜಿತಗೊಳ್ಳಲಿದೆ. ದೇಶದಲ್ಲಿರುವ ಒಂದು ಲಕ್ಷದಿಂದ ಐದು ಲಕ್ಷ ಜನಸಂಖ್ಯೆಯ ನಗರಗಳ ಪೈಕಿ ಮಂಗಳೂರು ನಗರವು ದೇಶದಲ್ಲೇ ಪ್ರಥಮ ಬಯಲು ಶೌಚಾಲಯ ಮುಕ್ತ ನಗರವಾಗಿ ಘೋಷಣೆಗೊಳಪಟ್ಟಿದೆ.

clean-cityಅತಿಥಿಯಾಗಿದ್ದ ಸಂಸದ ನಳಿನ್ ಕುಮಾರ್ ಮಾತನಾಡಿ, ಹಿಂದೆ ರಾಷ್ಟ್ರದಲ್ಲಿ ಪ್ರಥಮವಾಗಿ ನಿರ್ಮಲ ಗ್ರಾಮ ಯೋಜನೆ ಘೋಷಣೆಯ ವೇಳೆ ದಕ್ಷಿಣ ಕನ್ನಡ ಪ್ರಥಮ ಜಿಲ್ಲೆಯಾಗಿ ಈ ಪುರಸ್ಕಾರವನ್ನು ಪಡೆದುಕೊಂಡಿತ್ತು. ಇದೀಗ ದೇಶದಲ್ಲೇ ಮಂಗಳೂರು ಬಯಲು ಶೌಚಾಲಯ ಮುಕ್ತ ನಗರವಾಗಿ ಹೊರಹೊಮ್ಮುವ ಮೂಲಕ ಗ್ರಾಮಾಂತರ ಹಾಗೂ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಿರಿಮೆಯನ್ನು ದೇಶಕ್ಕೆ ಸಾರಿದೆ ಎಂದರು.

ಈ ಗೌರವವನ್ನು ಪಡೆಯುವಲ್ಲಿ ಮನಪಾ ಆಡಳಿತ, ವಿಪಕ್ಷ ಹಾಗೂ ಸಾರ್ವಜನಿಕ ಸಹಕಾರವೂ ಮಹತ್ವದ್ದಾಗಿದ್ದು, ರಾಜಕಾರಣ ಮಾಡದೆ ಮುನ್ನಡೆದಾಗ ಮಾತ್ರವೇ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದವರು ಹೇಳಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿ. ಸೋಜಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಉಪ ಮೇಯರ್ ಸುಮಿತ್ರ ಕರಿಯ, ಪರಿಸರ ಅಭಿಯಂತರ ಮಧು, ಮನಪಾ ಉಪ ಆಯುಕ್ತ ಗೋಕುಲ್ದಾಸ್ ನಾಯಕ್ ಉಪಸ್ಥಿತರಿದ್ದರು.

clean-city-3

clean-city

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English