ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧದ ಪ್ರಕರಣ ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಚಿತ್ರಕಲಾ ಪರಿಷತ್‌ನಲ್ಲಿ ಸುಧ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನಮಗೆ ಈ ಬಾರಿ ನ್ಯಾಯ ಸಿಗುವ ಭರವಸೆ ಇದೆ. ಕೇಂದ್ರ ಸರ್ಕಾರ ಕರೆದ ಸಭೆಯಲ್ಲಿ ಸಿಎಂ ಭಾಗವಹಿಸಿದ್ದಾರೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುತ್ತದೆ. ಕೇಂದ್ರ ಸರ್ಕಾರಕ್ಕೂ ವಸ್ತು ಸ್ಥಿತಿ ತಿಳಿಸುತ್ತೇವೆ. ಈ ಬಾರಿ ನಮಗೆ ನ್ಯಾಯ ಸಿಗಲೇಬೇಕು ಎಂದರು.
ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದ ವಿಚಾರಣೆ ಇದೆ. ಈ ಹಿನ್ನೆಲೆಯಲ್ಲಿ ಯಾವುದೇ ಗಲಾಟೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ಇಲಾಖೆ ಯಾವುದೇ ಘಟನೆ ನಡೆಯದಂತೆ ತಡೆಯಲು ಸಿದ್ಧತೆ ಮಾಡಿಕೊಂಡಿದೆ. ಯಾವಾಗ ಗಲಾಟೆ ಆಗುತ್ತೆ ಅಂತ ಗೊತ್ತಾಗಲ್ಲ. ಆದರೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ ಎಂದರು.
ಕಾವೇರಿ ನೀರು ಹರಿಸುವ ಸುಪ್ರೀಂ ತೀರ್ಪು ವಿರೋಧಿಸಿ ನಡೆದ ಗಲಾಟೆಯಲ್ಲಿ ಅಮಾಯಕರನ್ನು ಬಂಧಿಸುತ್ತಿಲ್ಲ. ವಿಡಿಯೋ ಹಾಗೂ ಸಿಸಿ ಟಿವಿಯಲ್ಲಿ ದೊರೆತ ಮಾಹಿತಿ ಆಧಾರದಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಮತ್ತೊಮ್ಮೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
Click this button or press Ctrl+G to toggle between Kannada and English