ಶಾಸಕ ಮೊಹಿಯುದ್ದೀನ್ ಬಾವ ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿರುವ ಬಗ್ಗೆ ಆಕ್ಷೇಪ

3:36 PM, Friday, September 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

MCCಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಚೊಕ್ಕಬೆಟ್ಟು ಎಂಬಲ್ಲಿ ಶಾಸಕ ಮೊಹಿಯುದ್ದೀನ್ ಬಾವ ಅವರು ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿರುವ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಮಧುಕಿರಣ್, ಶಾಸಕ ಬಾವ ಕಾನೂನು ಉಲ್ಲಂಘಿಸಿ ನಾಲ್ಕು ಅಂತಸ್ತಿನ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಕಟ್ಟಡಕ್ಕೆ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ ಎನ್ನುವುದನ್ನು ಪಾಲಿಕೆಯ ಜಂಟಿ ಆಯುಕ್ತರೂ ಒಪ್ಪಿಕೊಂಡಿದ್ದಾರೆ. ಕಟ್ಟಡ ಕಟ್ಟುವವರೆಗೆ ಪಾಲಿಕೆ ಅಧಿಕಾರಿಗಳು ಏನು ಮಾಡುತ್ತಿದ್ದರು? ನಾಗರಿಕರಿಗೊಂದು ಕಾನೂನು, ಶಾಸಕರಿಗೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದ್ದು, ತೀವ್ರ ಕೋಲಾಹಲಕ್ಕೆ ಕಾರಣವಾಯಿತು.

ಇದಕ್ಕೆ ಧ್ವನಿಗೂಡಿಸಿದ ಪ್ರೇಮಾನಂದ ಶೆಟ್ಟಿ, ರೂಪಾ ಬಂಗೇರ, ಸುಧೀರ್ ಶೆಟ್ಟಿ, ಕಟ್ಟಡವನ್ನು ನಿಯಮ ಪ್ರಕಾರವಾಗಿ ಕಟ್ಟಿದ್ದಾರೋ, ಇಲ್ಲವೋ ಎನ್ನುವುದನ್ನು ಸಭೆಯಲ್ಲೇ ತಿಳಿಸಬೇಕು ಎಂದು ಪಟ್ಟು ಹಿಡಿದರು. ಅಕ್ರಮವಾಗಿ ಕಟ್ಟಡ ಕಟ್ಟಿರುವ ಕುರಿತು ನೋಟಿಸ್ ನೀಡಲಾಗಿದ್ದು, ತಕ್ಷಣದಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಮೇಯರ್ ಸ್ಪಷ್ಟನೆ ನೀಡಿದರೂ ವಿಪಕ್ಷ ಸದಸ್ಯರ ಆಕ್ರೋಶ ತಗ್ಗಲಿಲ್ಲ. ಕೊನೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೇಯರ್ ಭರವಸೆ ನೀಡಿದ ನಂತರ ಸದಸ್ಯರು ಪ್ರತಿಭಟನೆ ಹಿಂಪಡೆದುಕೊಂಡರು.

MCCನಗರದ ಕೆಲವು ವಾರ್ಡ್‌ಗಳಲ್ಲಿ ಮಳೆಗಾಲದ ಈ ದಿನಗಳಲ್ಲೂ ನೀರು ಸರಿಯಾಗಿ ಬರುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ವಿತರಿಸಲಾಗುತ್ತಿದೆ ಎಂದು ಹಲವು ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಗರಂ ಆದ ಮೇಯರ್, ಕೆಲಸ ಮಾಡಲಾಗದಿದ್ದರೆ ಅಧಿಕಾರಿಗಳು ಇರುವುದಾದರೂ ಏಕೆ? ನಿಮಗೆ ಕೆಲಸ ಮಾಡಲಾಗದಿದ್ದರೆ ಕೆಲಸ ಬಿಟ್ಟು ಮನೆಗೆ ಹೋಗಿ ಎಂದು ಹರಿಹಾಯ್ದರು. ಕೂಡಲೆ ನೀರು ಪೂರೈಕೆ ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಮೇಯರ್‌ ಸೂಚನೆ ನೀಡಿದರು.

MCC

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English