ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ನಾಡ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ, ನಾಡೋಜ ಚೆನ್ನವೀರ ಕಣವಿ ಹಾಗೂ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ, ನಾಡೋಜ ಚೆನ್ನವೀರ ಕಣವಿ, ಅತ್ಯಂತ ಸಂತೋಷದಿಂದ ದಸರಾ ಉದ್ಘಾಟಿಸಿದ್ದೇನೆ. 74 ವರ್ಷದ ಹಿಂದೆ 1942ರಲ್ಲಿ ಮೊದಲ ಬಾರಿ ದಸರಾ ನೋಡಿದ್ದೆ. ಬರಗಾಲದ ಸಂದರ್ಭ ಸರಳ, ಸಾಂಪ್ರದಾಯಿಕ ದಸರಾ ಔಚಿತ್ಯ ಸರಿ ಇದೆ ಎಂದರು.
ಇದೇ ಸಂದರ್ಭದಲ್ಲಿ ಕಾವೇರಿ ವಿವಾದ ಪ್ರಸ್ತಾಪಿಸಿದ ಕಣವಿ, ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಜಲನೀತಿ ರೂಪಿಸುವ ಅಗತ್ಯವಿದೆ. ಈ ವಿವಾದಕ್ಕೆ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಕೂಡಲೇ ಬಗೆಹರಿಸಬೇಕು. ತಮಿಳುನಾಡು ಸದಾ ಕರ್ನಾಟಕಕ್ಕೆ ಆಗಾಗ ಚುಚ್ಚುತ್ತಲೇ ಇರುವ ಮಗ್ಗುಲ ಮುಳ್ಳು. ಸಂಕಷ್ಟ ಕಾಲದ ಸೂತ್ರ ರೂಪಿಸುವುದೇ ತುರ್ತು ಪರಿಹಾರ. ಸುಸಂಸ್ಕೃತ ನಾಡಿನಲ್ಲಿ ದುರ್ಘಟನೆಗಳು ನಡೆಯಬಾರದು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ವರ್ಷ ಭೀಕರ ಬರಗಾಲವಿತ್ತು. ಈ ವರ್ಷವೂ ಕೆಲ ಭಾಗಗಳಲ್ಲಿ ಅದೇ ಪರಿಸ್ಥಿತಿ ಇದೆ. ಜೊತೆಗೆ ಕಾವೇರಿ ಬಿಕ್ಕಟ್ಟು ಎದುರಿಸುತ್ತಿದ್ದೇವೆ. ಚೆನ್ನವೀರ ಕಣವಿ ರಾಜ್ಯ ಕಂಡ ಖ್ಯಾತ ಸಜ್ಜನ ಕವಿ. ಇಳಿ ವಯಸ್ಸಿನಲ್ಲೂ ನಮ್ಮ ಆಮಂತ್ರಣ ಒಪ್ಪಿ ಬಂದಿದ್ದಾರೆ. ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಸಿ ತಾಯಿ ಚಾಮುಂಡೇಶ್ವರಿ ಕೃಪೆ ಸಿಗಲಿ. ಕರ್ನಾಟಕಕ್ಕೆ ನ್ಯಾಯ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಜಲ ವಿವಾದ ಹೊಸತಲ್ಲ. ಬ್ರಿಟಿಷರ ಕಾಲದಲ್ಲಿ ನಡೆದ ಒಪ್ಪಂದದಲ್ಲಿ ಅವರು ಮೇಲುಗೈ ಸಾಧಿಸಿದ್ದರಿಂದ ನಮಗೆ ಅನ್ಯಾಯವಾಗಿದೆ. ಒಪ್ಪಂದದ ಅನ್ಯಾಯ 50 ವರ್ಷಕ್ಕೆ ಕೊನೆಯಾಗಬೇಕಿತ್ತು. ಆದರೆ ಈಗಲೂ ಅದರಿಂದ ಹೊರಬರಲಾಗದೆ ತೊಂದರೆಗೆ ಸಿಲುಕಿದ್ದೇವೆ. ಜಗತ್ತಿನ ಎಲ್ಲಿಯೂ ಜಲ ವಿವಾದದಲ್ಲಿ ಮಧ್ಯಂತರ ತೀರ್ಪು ನೀಡಿದ ಉದಾಹರಣೆ ಇಲ್ಲ ಎಂದರು.
ಎಲ್ಲಾ ವರ್ಷದಲ್ಲಿ ತಮಿಳುನಾಡಿಗೆ ನಿಗದಿಗಿಂತ ಹೆಚ್ಚು ನೀರು ಹರಿದಿದೆ. ಕಾವೇರಿ ಕೊಳ್ಳದಲ್ಲಿ 250 ಟಿಎಂಸಿ ನೀರು ಸಿಗುವಷ್ಟು ಮಳೆಯಾಗಬೇಕಿತ್ತು. 129 ಟಿಎಂಸಿ ಮಾತ್ರ ಸಿಕ್ಕಿದೆ. ಶೇ. 48ರಷ್ಟು ಮಳೆ ಕೊರತೆ ಎದುರಿಸುತ್ತಿದ್ದೇವೆ. 16 ಟಿಎಂಸಿ ನೀರು ಹೆಚ್ಚು ಹರಿಸಿದ್ದೇವೆ. ಮೊದಲ ಎರಡು ಆದೇಶ ಪಾಲಿಸಿದ್ದೇವೆ. ನಂತರದ ಆದೇಶ ಪಾಲನೆ ಮಾಡಲಾಗಿಲ್ಲ. ಜಲಾಶಯಗಳಲ್ಲಿ ಇರುವ ನೀರು ಕುಡಿಯುವ ನೀರಿಗೆ ಮಾತ್ರ ಸಾಕಾಗುತ್ತದೆ. ನಮಗೆ ಕುಡಿಯುವ ನೀರಿಗೆ ತತ್ವಾರವಿದೆ. ತಮಿಳುನಾಡು ಸಾಂಬಾ ಬೆಳೆಗಾಗಿ ನೀರು ಕೇಳುತ್ತಿದೆ. ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಜಾಪ್ರಭುತ್ವದ ಎಲ್ಲಾ ಅಂಗಗಳು ಸಮನಾಗಿ ಕೆಲಸ ಮಾಡಬೇಕು. ಚಾಮುಂಡೇಶ್ವರಿಯಲ್ಲಿ ಹರಕೆ ಮಾಡಿದ್ದೇನೆ. ಈ ಬಿಕ್ಕಟ್ಟಿನಿಂದ ಪಾರು ಮಾಡಬೇಕಿದೆ. ಮಧ್ಯಾಹ್ನ ಸರ್ವ ಪಕ್ಷ ಸಭೆ ಕರೆದಿದ್ದೇನೆ. ನಂತರ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
Click this button or press Ctrl+G to toggle between Kannada and English