ಕಾಸರಗೋಡು: ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ ಬರಹಗಳ ಪಾತ್ರ ಮಹತ್ವದ್ದಾಗಿದ್ದು, ಅವುಗಳ ಪೋಷಣೆ, ಪ್ರೇರಣಾತ್ಮಕ ಕಾರ್ಯಕ್ರಮಗಳು ಅಗತ್ಯ. ಸಾಮಾಜಿಕ ಜೀವನದ ಮೇಲೆ ಹೆಚ್ಚು ಪ್ರಭಾವಶಾಲಿಯಾಗುವ ಬರಹಗಳು ಬೆಳವಣಿಗೆಗಳ ಕೈದೀವಿಗೆಗಳೆಂದು ಒಡಿಯೂರು ದತ್ತಾಂಜನೇಯ ಕ್ಷೇತ್ರದ ಸಾಧ್ವಿ ಶ್ರೀಮಾತಾನಂದಮಯೀ ಅಭಿಪ್ರಾಯವ್ಯಕ್ತಪಡಿಸಿದರು.
ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನೇತೃತ್ವದಲ್ಲಿ ಭಾನುವಾರ ಸಂಜೆ ನಡೆದ ಕಾಸರಗೋಡು ದಸರಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಶ್ಯಾಮಲಾ ರವಿರಾಜ್ ಕುಂಬಳೆಯವರ ಅಮೃತಬಿಂದು ಕವನ ಸಂಕಲನ ಇಡುಗಡೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಕೃತಿ, ಪ್ರಕೃತಿಗಳು ಮಾನವೀಯತೆಯ ಸಂಬಂಧಗಳನ್ನು ಗಟ್ಟಿಗೊಳಿಸುವುದಾದರೆ ವಿಕೃತಿಯಿಂದ ಅವನತಿಗೆ ಕಾರಣವಾಗುತ್ತದೆ. ಪ್ರಾಚೀನ ಭಾರತೀಯ ಶಾಸ್ತ್ರ ಪರಂಪರೆಗಳು ಇವುಗಳನ್ನೇ ಎತ್ತಿಹಿಡಿದು ಸನ್ಮಾರ್ಗದ ಬೆಳಕನ್ನು ತೋರಿಸಿದೆ ಎಂದು ತಿಳಿಸಿದ ಅವರು, ಶಕ್ತಿ ಆರಾಧನೆ ವಿಕೃತಿಯ ನಿಯಂತ್ರಣದ ಒಂದು ಅಂಗವೆಂದು ತಿಳಿಸಿದರು. ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆಯ ಆರಾಧನೆ ಭರತಖಂಡದಲ್ಲಿ ಈ ಕಾರಣದಿಂದ ಮಹತ್ವ ಪಡೆದಿದ್ದು, ನಮ್ಮೊಳಗಿನ ದೂರ್ತತೆಗಳು, ಗೊಂದಲಗಳು ನವರಾತ್ರಿಯ ಪುಣ್ಯ ಆಚರಣೆಯಿಂದ ದೂರವಾಗಿ ಭಗವಂತ ಸಾಯುಜ್ಯದೆಡೆಗೆ ಮುನ್ನಡೆಸುವಂತಾಗಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಶ್ಯಾಮಲಾರವಿರಾಜರ ಕೃತಿ ಅಮೃತಬಿಂದುವನ್ನು ಬಿಡುಗಡೆಗೊಳಿಸಿದ ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಮಾತನಾಡಿ, ನಾಡು, ನುಡಿಗಳ ಸಂವೇದನೆ ಮತ್ತು ಸಂಘರ್ಷಗಳ ಬಗೆಗೆ ಬೆಳಕು ಚೆಲ್ಲುವ ಕೃತಿಗಳು ವಿಶಾಲ ಸಮಾಜ ನಿರ್ಮಾಣದಲ್ಲಿ ಮಹತ್ವ ಪಡೆಯುತ್ತದೆ.
ಸಾಹಿತ್ಯ ಬರಹಗಳ ಹುಟ್ಟಿಗೆ ಕಾರಣವಾಗುವ ಅನುಭವ ಬರಹಗಾರನ ಮಿತಿಗಳಾಚೆ ಸರ್ವವ್ಯಾಪಕತ್ವ ಪಡೆದಾಗ ಹೊಸ ಹೊಳಹುಗಳೊಡನೆ ಪರಿಣಾಮಕಾರಿಯಾದ ಸತ್ಯ ಹಾಗೂ ಸತ್ವ ದರ್ಶನಕ್ಕೆ ಕಾರಣವಾಗುತ್ತದೆಯೆಂದು ತಿಳಿಸಿದರು. ಬರಹಗಾರ ಅಕ್ಷರದ ರೂಪದಲ್ಲಿ ಮನಸ್ಸುಗಳ ಕದತಟ್ಟಿದಾಗ ಕವಿ ಕವಿತೆಗಳೆರಡೂ ಗೆಲ್ಲುವುದೆಂದು ಅವರು ವಿಶ್ಲೇಷಿಸಿದರು. ಸಾಮರಸ್ಯ,ಸಂಘರ್ಷಗಳ ನೆಲೆಗಟ್ಟಿನಲ್ಲಿ ಮಹಿಳಾ ಸಂವೇದನೆಯ ಕೃತಿ ಕಾಸರಗೋಡಿನಿಂದ ಇನ್ನಷ್ಟು ಬರಲೆಂದು ಅವರು ಹಾರೈಸಿದರು.
ಕಾಸರಗೋಡಿನ ವಿವೇಕಾನಂದ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಎನ್.ಸತೀಶ್ ಹಾಗೂ ನುಳ್ಳಿಪ್ಪಾಡಿ ಅಯ್ಯಪ್ಪ ಸ್ವಾಮಿ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಗಣಪತಿ ಕೋಟೆಕಣಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕವಿಯತ್ರಿ ಶ್ಯಾಮಲಾರವಿರಾಜ್ ಉಪಸ್ಥಿತರಿದ್ದರು. ರಾಮನಾಥ ಸಾಂಸ್ಕೃತಿಕ ಭವನಸಮಿತಿಯ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯಕುಶಲ ಸ್ವಾಗತಿಸಿದರು.
ಕಾರ್ಯಕ್ರಮದ ಮೊದಲಿಗೆ ಕು.ವಿಷ್ಣು ಪ್ರಿಯಾ ಕಾಸರಗೋಡು ರವರಿಂದ ಗಾನವೈವಿಧ್ಯ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯದಲ್ಲಿ ಪ್ರೇಮಲೀಲಾ ಹಾಗೂ ಶ್ರೀಧರ ರೈ ಸಹಕರಿಸಿದರು.ಬಳಿಕ ದಸರಾ ಕವಿಗೋಷ್ಠಿ ನಡೆಯಿತು.
Click this button or press Ctrl+G to toggle between Kannada and English