ಮಂಗಳೂರು: ಕರಾವಳಿ ಕಾಂಗ್ರೆಸ್ ಅಲ್ಪ ಸಂಖ್ಯಾಕ ಘಟಕದ ಅಧ್ಯಕ್ಷ ಇಸ್ಮಾಯಿಲ್ ನೇಲ್ಯಮಜಲು (52) ಅವರನ್ನು ಸೆ. 23 ರಂದು ಸುಳ್ಯದ ಐವರ್ನಾಡು ಮಸೀದಿಯ ಬಳಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಳಾಯಿ ಮನೆಯ ಅಬ್ದುಲ್ ರಶೀದ್ ಯಾನೆ ಮುನ್ನಾ (32), ಮಂಗಳೂರು ತಾಲೂಕು ಸುರತ್ಕಲ್ ಕೃಷ್ಣಾಪುರ 8 ನೇ ಕ್ರಾಸ್‌ನ ಆಬ್ಟಾಸ್ ಯಾನೆ ಇಬು° ಅಬ್ಟಾಸ್ (32), ಪುತ್ತೂರು ತಾಲೂಕು ಕೆದಿಲದ ಉಮ್ಮರ್ ಫಾರೂಕ್ ಎ.ಕೆ. (32), ಬೆಳ್ಳಾರೆಯ ರಹಿಮಾನ್ ಯಾನೆ ರಹೀಂ ಮತ್ತು ಫಾರೂಕ್, ಮಂಗಳೂರು ಬಿಜೈನ ಯಾಕೂಬ್, ಬಂಟ್ವಾಳ ತಾಲೂಕು ನಂದಾವರದ ಸೊಹೈಲ್ ಬಂಧಿತರು. ಆರೋಪಿಗಳಿಂದ ಕೃತ್ಯಕೆಕ ಉಪಯೋಗಿಸಿದ ರಿಟ್ಜ್ ಕಾರು ಮತ್ತು ಇತರ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಬಂಧಿಸಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೋರಸೆ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಅಡೀಶನಲ್ ಎಸ್‌ಪಿ ಡಾ | ವೇದಮೂರ್ತಿ, ಪುತ್ತೂರು ಎಎಸ್‌ಪಿ ರಿಷ್ಯಂತ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಇಸ್ಮಾಯಿಲ್ ಅವರನ್ನು ಸೆ. 23 ರಂದು (ಶುಕ್ರವಾರ) ಮಧ್ಯಾಹ್ನ 1.45 ಕ್ಕೆ ಅವರು ಐವರ್ನಾಡು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಹೊಂಚು ಹಾಕಿದ್ದ ತಂಡ ಮಾರಕಾಸ್ತಗಳಿಂದ ಯದ್ವಾ ತದ್ವಾ ಕಡಿದು ಕೊಲೆ ಮಾಡಿ ಪರಾರಿಯಾಗಿತ್ತು.
ಭೂ ವಿವಾದ ಈ ಕೊಲೆ ಕೃತ್ಯಕ್ಕೆ ಕಾರಣ. ಉಮ್ಮರ್ ಫಾರೂಕ್ ಎ.ಕೆ. ಈ ಪ್ರಕರಣದ ರೂವಾರಿ. ಆತ ಮತ್ತು ಅಬ್ದುಲ್ ರಶೀದ್ ಯಾನೆ ಮುನ್ನಾ ಹಾಗೂ ಅಬ್ಟಾಸ್ ಯಾನೆ ಇಬು° ಅಬ್ಟಾಸ್ ಅವರು ಕೊಲೆ ಕೃತ್ಯವನ್ನು ಎಸಗಿದ್ದರು. ಉಳಿದ ನಾಲ್ವರು ಆರೋಪಿಗಳು ಹತ್ಯೆಯ ಯೋಜನೆ ಮತ್ತು ಸಲಹೆ ಸಹಕಾರವನ್ನು ನೀಡಿದ್ದರು.
ರಹಿಮಾನ್ ಬೆಳ್ಳಾರೆ ಕುಟುಂಬ ಮತ್ತು ಬೆಳ್ಳಾರೆಯ ಝಕಾರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿಗಳ ನಡುವೆ ಹಲವಾರು ವರ್ಷಗಳಿಂದ ಜಮೀನಿನ ವಿವಾದ ಇತ್ತು. ಈ ವಿವಾದದಲ್ಲಿ ಇಸ್ಮಾಯಿಲ್ ಬೆಳ್ಳಾರೆ ಅವರು ಝಕಾರಿಯಾ ಜುಮ್ಮಾ ಮಸೀದಿಯ ಆಡಳಿತ ಮಂಡಳಿಯನ್ನು ಬೆಂಬಲಿದ್ದರು. ಇದರಿಂದ ರಹಿಮಾನ್ ಬೆಳ್ಳಾರೆ ಮತ್ತು ಇಸ್ಮಾಯಿಲ್ ಬೆಳ್ಳಾರೆ ಮಧ್ಯೆ ದ್ವೇಷ ಉಂಟಾಗಿತ್ತು. ಹಾಗೆಯೇ ಯಾಕೂಬ್ ಬಿಜೈ (ಯಾಕೂಬ್ ಮೂಲತ: ಬೆಳ್ಳಾರೆಯವರಾಗಿದ್ದು, ಪ್ರಸ್ತುತ ಮಂಗಳೂರಿನ ಬಿಜೈನಲ್ಲಿ ವಾಸವಾಗಿದ್ದಾರೆ) ಮತ್ತು ಇಸ್ಮಾಯಿಲ್ ಪ್ರಾರಂಭದಲ್ಲಿ ಸ್ನೇಹಿತರಾಗಿದ್ದರು.
ಯಾಕೂಬ್ ಬಿಜೈ ತನ್ನ ಜಾಗವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಇಸ್ಮಾಯಿಲ್‌ನ ಸಹಾಯ ಪಡೆದಿದ್ದನು. ಆದರೆ ಬಳಿಕ ಇದೇ ಜಮೀನು ವಿಚಾರದಲ್ಲಿ ಅವರಿಬ್ಬರ ನಡುವೆ ದ್ವೇಷ ಹುಟ್ಟಿಕೊಂಡಿತ್ತು.
ಯಾಕೂಬ್ ಮತ್ತು ರಹಿಮಾನ್ ಅವರಿಬ್ಬರೂ ಸೇರಿಕೊಂಡು ಇಸ್ಮಾಯಿಲ್ ಹತ್ಯೆಗೆ ಸಂಚು ರೂಪಿಸಿದ್ದರು. ಬಳಿಕ ಉಮ್ಮರ್ ಫಾರೂಕ್‌ನನ್ನು ಸಂಪರ್ಕಿಸಿ ಸುಪಾರಿ ಹಣ ಮತ್ತು ತಕರಾರು ಜಮೀನಿನಲ್ಲಿ ಪಾಲು ನೀಡುವುದಾಗಿ ಹೇಳಿ ಸುಪಾರಿ ಹಂತಕರ ಜತೆ ಮಾತುಕತೆ ನಡೆಸಿದ್ದರು. ಸುಪಾರಿ ಮೊತ್ತದಲ್ಲಿ ಸ್ವಲ್ಪ ಹಣವನ್ನು ಮುಂಗಡವಾಗಿ ರಹೀಂ ಮತ್ತು ಯಾಕೂಬ್ ಅವರು ಮಂಗಳೂರಿನಲ್ಲಿ ಉಮ್ಮರ್ ಫಾರೂಕ್‌ನಿಗೆ ನೀಡಿದ್ದರು. ಹಾಗೆ ಈ ಹತ್ಯೆ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಎಸ್‌ಪಿ ವಿವರಿಸಿದರು.
ಹಂತಕರು ನಾಲ್ಕು ವಾರಗಳಿಂದ ಇಸ್ಮಾಯಿಲ್ ಕೊಲೆಗೆ ಹೊಂಚು ಹಾಕಿ ಕಾಯುತ್ತಿದ್ದರು. ಆದರೆ ಇಸ್ಮಾಯಿಲ್ ಒಬ್ಬಂಟಿಯಾಗಿ ಸಿಗುತ್ತಿರಲಿಲ್ಲ. ಅದಕ್ಕಾಗಿ ಸಮಯ ಕಾಯುತ್ತಿದ್ದ ಆರೋಪಿಗಳು ಪ್ರತಿ ಶುಕ್ರವಾರ ಇಸ್ಮಾಯಿಲ್ ಅವರು ಮಸೀದಿಗೆ ಬಂದು ಹೋಗುವುದನ್ನು ಗಮನಿಸಿದ್ದರು.
ಸೆ. 23 ರಂದು ಮಸೀದಿಯಿಂದ ಬೇಗನೆ ಪ್ರಾರ್ಥನೆ ಮುಗಿಸಿ ಇಸ್ಮಾಯಿಲ್ ಹೊರ ಬರುತ್ತಿದ್ದಂತೆ ಹಂತಕರು ಮಾರಕಾಯುಧದಿಂದ ಹೊಡೆದಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದ ಕೆಂಗೆಟ್ಟ ಇಸ್ಮಾಯಿಲ್ ತನ್ನ ಬಳಿ ಆತ್ಮರಕ್ಷಣೆಗೆ ಪಿಸ್ತೂಲ್ ಇದ್ದರೂ ಅದನ್ನು ಉಪಯೋಗಿಸಿ ಕೊಳ್ಳಲು ಸಮಯ ಸಿಗಲಿಲ್ಲ. ಘಟನೆಯಲ್ಲಿ ತೀವ್ರ ಸ್ವರೂಪದ ಗಾಯಗೊಂಡಿದ್ದ ಇಸ್ಮಾಯಿಲ್ ಸಾವನ್ನಪ್ಪಿದ್ದರು.
ಈ ಕೊಲೆ ಪ್ರಕರಣವನ್ನು ಬೇಧಿಸಲು ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿತ್ತು. ಈ ತಂಡ 10 ದಿನಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
2014ರಲ್ಲಿ ಇಸ್ಮಾಯಿಲ್ ಹಾಗೂ ಕುಟುಂಬದ ಮೇಲೆ ರಹಿಮಾನ್‌ನ ಸಹೋದರ ಸಿದ್ಧಿಕ್ ದಾಳಿ ನಡೆಸಿದ್ದ. ಆಗ ಇಸ್ಮಾಯಿಲ್ ಪ್ರಾಣಾಪಾಯದಿಂದ ಪಾರಾಗಿದ್ದರು. ಪ್ರಮುಖ ಆರೋಪಿಗಳಾದ ಅಬ್ದುಲ್ ರಶೀದ್ ವಿರುದ್ಧ 3 ಕೊಲೆಯತ್ನದ ಪ್ರಕರಣಗಳು ಬೆಳ್ತಂಗಡಿ, ಬಜಪೆ ಮತ್ತು ಪಣಂಬೂರು ಠಾಣೆಗಳಲ್ಲಿ ದಾಖಲಾಗಿದ್ದವು. ಅಬ್ಟಾಸ್ ವಿರುದ್ಧ ಸುರತ್ಕಲ್ ಮತ್ತು ಬಜಪೆ ಠಾಣೆಗಳಲ್ಲಿ ಕೇಸುಗಳಿವೆ.
ಆರೋಪಿಗಳಾದ ಅಬ್ದುಲ್ ರಶೀದ್ ಮತ್ತು ಅಬ್ಟಾಸ್‌ನನ್ನು ಉಡುಪಿ ಜಿಲ್ಲಯ ಮಟ್ಟು ಕ್ರಾಸ್ ಬಳಿ ಹಾಗೂ ಉಮ್ಮರ್ ಫಾರೂಕ್‌ನನ್ನು ಪುತ್ತೂರಿನ ಕಬಕದಲ್ಲಿ ರವಿವಾರ ಬಂಧಿಸಲಾಗಿದೆ. ಉಳಿದವರನ್ನು ಸೋಮವಾರ ದಸ್ತಗಿರಿ ಮಾಡಲಾಯಿತು ಎಂದರು.
ಕಾರ್ಯಾಚರಣೆಯಲ್ಲಿ ಎಎಸ್‌ಪಿ ರಿಷ್ಯಂತ್, ಬಂಟ್ವಾಳದ ಡಿವೈಎಸ್‌ಪಿ ರವೀಶ್, ಡಿಸಿಐಬಿ ಇನ್ಸಪೆಕ್ಟರ್ ಅಮಾನುಲ್ಲಾ, ಇನ್ಸ್‌ಸ್ಪೆಕ್ಟರ್‌ಗಳಾದ ಕೃಷ್ಣಯ್ಯ (ಸುಳ್ಯ), ಚೆಲುವಯ್ಯ (ಬೆಳ್ಳಾರೆ), ಪಿಎಸ್‌ಐಗಳಾದ ಚಂದ್ರಶೇಖರ್ (ಸುಳ್ಯ), ರವಿ (ಬೆಳ್ತಂಗಡಿ) ಹಾಗೂ ಸಿಬಂದಿ ಭಾಗವಹಿಸಿದ್ದರು. ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬಂದಿಗೆ ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದು ಎಸ್‌ಪಿ ವಿವರಿಸಿದರು.
Click this button or press Ctrl+G to toggle between Kannada and English