ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಾಸುದೇವ ಅಸ್ರಣ್ಣ ಅವರ ಮನೆಗೆ ಸೋಮವಾರ ತಡರಾತ್ರಿ ಎಂಟು ಮಂದಿ ಮುಸುಕುಧಾರಿಗಳ ತಂಡ ನುಗ್ಗಿ ಸುಮಾರು 55 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿ ಪರಾರಿಯಾದ ಘಟನೆ ನಡೆದಿದೆ.
ಕಟೀಲು ದೇವಸ್ಥಾನದಲ್ಲಿ ರಾತ್ರಿ ಹುಲಿವೇಷಗಳ ವಿಶೇಷ ಪೂಜೆ ಹಾಗೂ ಕುಣಿತವಿದ್ದ ಕಾರಣ ರಾತ್ರಿ 12.10 ಕ್ಕೆ ವಾಸುದೇವ ಅಸ್ರಣ್ಣ ದೇವಸ್ಥಾನದ ಪಕ್ಕವೇ ಇರುವ ಮನೆಗೆ ದುಷ್ಕರ್ಮಿಗಳು ಬಂದಿದ್ದಾರೆ. ಮನೆಯಲ್ಲಿ ತಾಯಿ, ಪತ್ನಿ, ಸೊಸೆ, ಮಗಳು, ಅವರ ಮಕ್ಕಳು ಇದ್ದರು ಎನ್ನಲಾಗಿದೆ.
ಏಕಾಏಕಿ ನುಗ್ಗಿದ ಮುಸುಕುಧಾರಿಗಳು ಯಾರೋ ಮೂರ್ಛೆ ಹೋಗಿದ್ದಾರೆ. ಪ್ರಸಾದ ನೀಡುವಂತೆ ಕೇಳಿದ್ದಾರೆ. ಇಷ್ಟು ಹೊತ್ತಿಗೆ ಎಂತಹ ಪ್ರಸಾದ ಎಂದು ಅನ್ನುತ್ತಿರುವಾಗಲೇ ಮನೆಯವರನ್ನು ಕೋಣೆಯೊಳಗೆ ಕೂಡಿಹಾಕಿ ಅವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ಒಟ್ಟು 82 ಪವನ್ ಚಿನ್ನ ಮತ್ತು 50ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಬಳಿಕ ಅಸ್ರಣ್ಣರ ಸಹೋದರ ವೆಂಕಟರಮಣರಿಗೆ ಕರೆಮಾಡಿದ ಮೊಮ್ಮಗಳಿಂದ ವಿಷಯ ತಿಳಿದು ಮನೆಗೆ ಬಂದಾಗ ಮನೆಯ ಬಾಗಿಲು ತೆರೆದೇ ಇತ್ತು. ಕೋಣೆಯೊಳಗೆ ಮನೆಯವರನ್ನು ಕೂಡಿಹಾಕಲಾಗಿತ್ತು. ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು.
ದರೋಡೆಕೋರರು ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಿದ್ದುದರಿಂದ ಸ್ಥಳೀಯರಾಗಿರಬಹುದು ಎಂದು ಶಂಕಿಸಲಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English