ಮಂಗಳೂರು: ಕಳೆದ ಐದು ವರ್ಷಗಳಿಂದ ನಿರಂತರ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಜೈಲಿಗೆ ಸ್ಥಳಾಂತರಿಸಿದ್ದಾರೆ.
ಬಂದರು ಅನ್ಸಾರಿ ರಸ್ತೆ ಸಿ.ಪಿ.ಸಿ. ಕಾಂಪೌಂಡ್ ಬಳಿಯ ನಿವಾಸಿ ಟಿ.ಪಿ. ರಹೀಂ ಯಾನೆ ಗೂಡ್ಸ್ ರಹೀಂ ಯಾನೆ ಕಿಂಡಿ ರಹೀಂ (41) ಬಂಧಿತ ಆರೋಪಿ. ಮಂಗಳೂರು ಪೊಲೀಸರು ಈ ರೀತಿ ಮೊದಲ ಬಾರಿಗೆ ಗೂಂಡಾ ಕಾಯ್ದೆ ಹೇರಿದ್ದು, ಇನ್ನುಳಿದ ಮಾದಕ ವಸ್ತು ಪೂರೈಕೆ ಆರೋಪಿಗಳನ್ನು ಗೂಂಡಾ ಕಾಯ್ದೆ ಹೇರಿ ಜೈಲಿಗಟ್ಟಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ವಿರುದ್ಧ ಬಂದರು ಪೊಲೀಸ್ ಠಾಣೆ, ಪಣಂಬೂರು ಹಾಗೂ ಬರ್ಕೆ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಎನ್‌ಡಿಪಿಎಸ್ ಕಾಯ್ದೆಯಡಿ (ಮಾದಕ ವಸ್ತು ಪೂರೈಕೆ) ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಪೈಕಿ 5 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, 3 ಪ್ರಕರಣಗಳು ತನಿಖಾ ಹಂತದಲ್ಲಿವೆ.
ಮಾದಕ ವಸ್ತುಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಈವರೆಗೆ 94.219 ಕೆ.ಜಿ.ಯಷ್ಟು ಕೆನಬೀಸ್ ಹಾಗೂ ಗಾಂಜಾ ಮತ್ತು 60 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಈವರೆಗೆ 40 ರೈಡ್ ಹಾಗೂ 135 ಮಾದಕ ವ್ಯಸನಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶವೇ ಬಹುದೊಡ್ಡ ಮಾದಕವಸ್ತು ಪೂರೈಕೆ ಕೇಂದ್ರವಾಗಿದ್ದು ಇನ್ನುಳಿದ ಪ್ರದೇಶಗಳಿಂದಲೂ ಪೂರೈಕೆಯಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
Click this button or press Ctrl+G to toggle between Kannada and English