ಹೆಬ್ಟಾವಿನ ಜತೆ ಕಾದಾಡಿ ಜೀವವುಳಿಸಿಕೊಂಡು ಸಾಹಸ ಮೆರೆದ ಬಾಲಕ ವೈಶಾಖ್‌

2:58 PM, Wednesday, October 5th, 2016
Share
1 Star2 Stars3 Stars4 Stars5 Stars
(No Ratings Yet)
Loading...

python-attackಮಂಗಳೂರು: ದಾರಿಯಲ್ಲಿ ಸಾಗುತ್ತಿದ್ದಾಗ ಮೈಮೇಲೆ ಹಾರಿ ಸುತ್ತಿಕೊಳ್ಳಲಾರಂಭಿಸಿದ ಹೆಬ್ಟಾವಿನ ಜತೆ ಬಾಲಕನೋರ್ವ ಕಾದಾಡಿ ಜೀವವುಳಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಸಮೀಪದ ಕೊಳಕೆಯಲ್ಲಿ ಮಂಗಳವಾರ ನಡೆದಿದೆ.

ಸಜೀಪ ಆದರ್ಶ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ 11ರ ಹರೆಯದ ವೈಶಾಖ್‌ ಸಾಹಸ ಮೆರೆದು ಪ್ರಾಣವುಳಿಸಿಕೊಂಡ ಬಾಲಕ. ಕೊಳಕೆ ಕೂಡೂರು ನಿವಾಸಿ ಸುರೇಶ್‌ ಅವರ ಪುತ್ರ ವೈಶಾಖ್‌ ಎಂದಿನಂತೆ ಸಂಜೆ ಶಾಲೆಯಿಂದ ಮನೆಗೆ ಬಂದು ಉಪಾಹಾರ ಸೇವಿಸಿ, ಸಮೀಪದಲ್ಲೇ ಇರುವ ತನ್ನ ಅಜ್ಜನ ಮನೆಗೆ ತೆರಳಿದ್ದ. ಸಾಗುವ ಹಾದಿ ಪೊದೆಗಳಿಂದ ಆವೃತವಾಗಿದೆ. ಸಂಜೆ 6 ಗಂಟೆಯ ವೇಳೆಗೆ ಮನೆಗೆ ಮರಳಿ ಬರುತ್ತಿದ್ದಾಗ ಪೊದೆಗಳೆಡೆಯಿಂದ ಹೆಬ್ಟಾವು ಒಮ್ಮೆಲೇ ಆತನ ಮೇಲೆ ಎರಗಿತು. ನೆಲಕ್ಕುರುಳಿದ ಬಾಲಕನನ್ನು ಹೆಬ್ಟಾವು ಸುತ್ತಿಕೊಳ್ಳಲು ಪ್ರಾರಂಭಿಸಿತ್ತು.

ದಿಢೀರ್‌ ಆಗಿ ನಡೆದ ಘಟನೆಯಿಂದ ವಿಚಲಿತನಾಗದೆ ಸಮಯಪ್ರಜ್ಞೆ ಮೆರೆದ ಬಾಲಕ ಹಾವಿನ ಜತೆ ಸೆಣಸಾಡಲು ತೊಡಗಿದ. ಹೆಬ್ಟಾವು ಆತನ ಕೈ, ಕಾಲುಗಳಿಗೆ ಬಾಯಿ ಹಾಕಿ ನುಂಗಲು ಪ್ರಯತ್ನಿಸಿದೆ. ಅಷ್ಟರಲ್ಲಿ ಆತನಿಗೆ ಪಕ್ಕದಲ್ಲಿ ಕಲ್ಲೊಂದು ಗೋಚರಿಸಿದ್ದು ಅದನ್ನೇ ಕೈಗೆತ್ತಿಕೊಂಡು ಹಾವಿನ ಮುಖಕ್ಕೆ ಜಜ್ಜಿದ್ದಾನೆ. ಇದರಿಂದ ಹಾವಿನ ಮುಖಕ್ಕೆ ತೀವ್ರ ಗಾಯವಾಗಿದ್ದು ಕಣ್ಣು ಸಂಪೂರ್ಣ ಜಖಂಗೊಂಡಿತು. ಬಾಲಕನ ಕಲ್ಲಿನ ಪ್ರಹಾರದಿಂದ ವಿಚಲಿತವಾದ ಹೆಬ್ಟಾವು ಆತನನ್ನು ಬಿಟ್ಟು ಪಕ್ಕಕ್ಕೆ ಸರಿದಿದೆ.

ಬಾಲಕನ ಬೊಬ್ಬೆ ಕೇಳಿ ಅಲ್ಲೇ ಸಮೀಪದ ಮನೆಯ ಹರ್ಷಿತಾ ಎಂಬ ಹುಡುಗಿ ಓಡಿ ಬಂದಿದ್ದಳು. ಆದರೆ ಆಕೆಗೆ ಅಪಾಯವಾಗಬಾರದೆಂದು ಅವಳನ್ನು ಹತ್ತಿರಕ್ಕೆ ಬಾರದಂತೆ ಬಾಲಕನೇ ತಡೆದಿದ್ದನು. ಕೊನೆಗೆ ಹೆಬ್ಟಾವಿನ ಹಿಡಿತದಿಂದ ಪಾರಾದ ಬಾಲಕ ಆತನನ್ನು ಆಕೆ ಎತ್ತಿ ಮನೆಗೆ ಕರೆದುಕೊಂಡು ಹೋಗಿದ್ದಾಳೆ.

ಸೆಣಸಾಟದ ವೇಳೆ ಹಾವು ಬಾಲಕನ ಕೈ, ಕಾಲು ಹಾಗೂ ದೇಹದ ಇತರ ಭಾಗಗಳಿಗೆ ಕಚ್ಚಿದ್ದು, ಇದರಿಂದ ಆತನಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು. ಮನೆಯವರು ಆತನನ್ನು ಕೂಡಲೇ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಂದ ತುಂಬೆಯಲ್ಲಿರುವ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದು ಅದರಂತೆ ಅಲ್ಲಿಗೆ ಕರೆದುಕೊಂಡು ಹೋದಾಗ ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಕಂಕನಾಡಿಯ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಬಾಲಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು , ಅಪಾಯದಿಂದ ಪಾರಾಗಿದ್ದಾನೆ ಎಂದು ಆತನ ತಂದೆ ಸುರೇಶ್‌ ತಿಳಿಸಿದ್ದಾರೆ. ಸುರೇಶ್‌ ಅವರು ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದಾರೆ. ವೈಶಾಖ್‌ ಬಾಲ್ಯದಿಂದಲೂ ಧೈರ್ಯವಂತನಾಗಿದ್ದು, ಯಾವುದಕ್ಕೂ ಹೆದರುವವನಲ್ಲ ಎಂದು ಅವರು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English