ಮಂಗಳೂರು: ಹೆಬ್ಟಾವಿನೊಂದಿಗೆ ಸೆಣಸಿ ಪ್ರಾಣಾಪಾಯದಿಂದ ಪಾರಾದ ಬಂಟ್ವಾಳ ತಾಲೂಕು ಸಜೀಪ ಸಮೀಪದ ಕೊಳಕೆಯ ಬಾಲಕ ವೈಶಾಖ್‌ನನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ತಿಳಿಸಿದ್ದಾರೆ.
ಅವರು ಬುಧವಾರ ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಕಂಡು ಆರೋಗ್ಯ ವಿಚಾರಿಸಿದರು.
ವೈಶಾಖ್‌ನ ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತನನ್ನು ಶಾಲು ಹೊದೆಸಿ, ಹಾರ ಹಾಕಿ ಐವನ್ ಡಿ’ಸೋಜಾ ಬಾಲಕನನ್ನು ಗೌರವಿಸಿದರು. ಬಾಲಕನ ತಾಯಿ, ಹರಿಣಾಕ್ಷಿ ಸುರೇಶ್, ವೈದ್ಯ ಡಾ| ಉದಯ ಕುಮಾರ್, ಚೀಫ್ ನರ್ಸಿಂಗ್ ಸೂಪರಿಂಟೆಂಡೆಂಟ್ ಸಿ| ಜಾನೆಟ್ ಅವರೊಂದಿಗೆ ಬಾಲಕ ವೈಶಾಖ್‌ನ ಆರೋಗ್ಯವನ್ನು ವಿಚಾರಿಸಿದರು. ಬಾಲಕನ ಸಂಬಂಧಿ ದಿನೇಶ್ ಪಾಂಡೇಶ್ವರ ಅವರು ಮಾಹಿತಿ ನೀಡಿದರು.
ಹೆಬ್ಟಾವಿನೊಂದಿಗೆ ಹೋರಾಡಿ ತನ್ನ ಪ್ರಾಣಧಿವನ್ನು ಉಳಿಸಿದ್ದಲ್ಲದೆ ಅದೇ ದಾರಿಯಾಗಿ ಬರುತ್ತಿದ್ದ ಸೋದರಿ ಹರ್ಷಿತಾ (ವೈಶಾಖ್‌ನ ದೊಡ್ಡಪ್ಪನ ಪುತ್ರಿ) ಅವರಿಗೆ ಹತ್ತಿರ ಬಾರದಂತೆ ಸೂಚಿಸಿ ಆಕೆಯ ಜೀವವನ್ನೂ ಉಳಿಸಲು ಕಾರಣನಾದ ವೈಶಾಖ್‌ನ ಧೈರ್ಯ ಮತ್ತು ಸಾಹಸ ಅಸಾಧಾರಣ. ಆತ ಇತರರಿಗೆ ಮಾದರಿಯಾಗಿದ್ದಾನೆ. ಆತನಿಗೆ ಶೌರ್ಯ ಪ್ರಶಸ್ತಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಯುವ ಸಬಲೀಕರಣ ಇಲಾಖೆಗೆ ಶಿಫಾರಸು ಮಾಡುತ್ತೇನೆ ಎಂದು ಐವನ್ ಡಿ’ಸೋಜಾ ಈ ಸಂದರ್ಭದಲ್ಲಿ ತಿಳಿಸಿದರು.
ಚಿಕಿತ್ಸೆಯ ವೆಚ್ಚವನ್ನು ತಾನು ವೈಯಕ್ತಿಕ ನೆಲೆಯಲ್ಲಿ ಭರಿಸುವುದಾಗಿ ಐವನ್ ಡಿ’ಸೋಜಾ ಭರವಸೆ ನೀಡಿದರು. ಸಜೀಪ ಗ್ರಾಮದ ಕೊಳಕೆ ಕೂಡೂರಿನ ಸುರೇಶ್ ಮತ್ತು ಹರಿಣಾಕ್ಷಿ ಅವರ 11 ವರ್ಷದ ಪುತ್ರ ಸಜೀಪ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ವೈಶಾಖ್ ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಬಂದು ಉಪಾಹಾರ ಸೇವಿಸಿ ಸಮೀಪಲ್ಲಿ ಇರುವ ಅಜ್ಜನ ಮನೆಗೆ ತೆರಳಿ 6 ಗಂಟೆ ವೇಳೆಗೆ ತನ್ನ ಮನೆಗೆ ವಾಪಸಾಗುತ್ತಿದ್ದಾಗ ಪೊದೆಗಳೆಡೆಯಿಂದ ಹೆಬ್ಟಾವು ಏಕಾಏಕಿ ಮೇಲೆರಗಿತ್ತು.
Click this button or press Ctrl+G to toggle between Kannada and English