ಮಂಗಳೂರು: ಕೆಂಬೇರಿ ಮೀನಿನ ತಲೆ ಭಾಗ ತಿಂದು ಹಲವಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರಿಕಾ ಕಾಲೇಜಿನ ತಜ್ಞರು, ವಿಜ್ಞಾನಿಗಳು, ಆರೋಗ್ಯ, ಆಹಾರ ಸುರಕ್ಷತೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸಭೆ ನಡೆಸಿ ಚರ್ಚಿಸಿದರು.
ಕೆಂಬೇರಿ, ತೊಂದೆ ಎಂಬ ಹೆಸರಿನ ಮೀನುಗಳ ಕೆಲವು ತಳಿಗಳ ದೇಹದ ಕೆಲವು ಭಾಗಗಳಲ್ಲಿ ವಿಷಕಾರಿ ಪದಾರ್ಥಗಳು ಇರುವುದರಿಂದ ಅವುಗಳನ್ನು ತಿನ್ನದಂತೆ ಎಚ್ಚರ ವಹಿಸಬೇಕು ಹಾಗೂ ಸಂಬಂಧಪಟ್ಟವರು ಇಂತಹ ಮೀನುಗಳು ಜನಸಾಮಾನ್ಯರಿಗೆ ತಲುಪದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಮೀನು ಸಂರಕ್ಷಣಾ ಘಟಕಗಳು ಈ ಮೀನುಗಳ ಸಂರಕ್ಷಣೆಯ ಬಗ್ಗೆ ಸೂಕ್ತ ನಿಗಾವಹಿಸುವಂತೆ ಎಚ್ಚರಿಸಿದ ಅವರು, ಯಾವುದೇ ಕಾರಣಕ್ಕೂ ಇಂತಹ ಮೀನುಗಳು ಘಟಕಕ್ಕೆ ಬರುವ ಮಧ್ಯೆ ಇತರರ ಕೈ ಸೇರಿ ಸಾರ್ವಜನಿಕರಿಗೆ ಸಿಗದಂತೆ ಎಚ್ಚರಿಕೆ ವಹಿಸಬೇಕು. ಮಾತ್ರವಲ್ಲದೆ ಸೂಕ್ತ ರೀತಿಯಲ್ಲಿ ಮೀನನ್ನು ಸಂಸ್ಕರಿಸಿ, ಮೀನಿನ ತಲೆ ಸೇರಿದಂತೆ ವಿಷಕಾರಿ ಅಂಶಗಳುಳ್ಳ ಮೀನಿನ ಭಾಗಗಳು ಕ್ಯಾಂಟೀನ್‌ಗಳ ಮೂಲಕ ಸಾರ್ವಜನಿಕರಿಗೆ ಸಿಗದಂತೆ ಎಚ್ಚರ ವಹಿಸಬೇಕು.
ಜಾಗೃತಿ ಇಲ್ಲದೆ ಕಡಿಮೆ ಬೆಲೆಗೆ ಸಿಗುವ ಈ ಮೀನಿನ ಭಾಗಗಳನ್ನು ಬಡ ಸಾರ್ವಜನಿಕರು ಖರೀದಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಪ್ರಸಕ್ತ ನಡೆದ ಘಟನೆಯಿಂದ ತಿಳಿದು ಬಂದಿದೆ. ಹಾಗಾಗಿ ಮುಂದೆ ಇಂತಹ ಘಟನೆಗಳು ಕಂಡು ಬಂದಲ್ಲಿ, ಸಂಬಂಧಪಟ್ಟ ಸಂಸ್ಕರಣಾ ಘಟಕಗಳನ್ನೇ ಜವಾಬ್ದಾರನ್ನಾಗಿಸಲಾಗುವುದು. ಈಗಾಗಲೇ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರ ಆಸ್ಪತ್ರೆ ಶುಲ್ಕವನ್ನು ಮೀನು ಸಂಸ್ಕರಣಾ ಘಟಕಗಳವರೇ ಭರಿಸಬೇಕು ಎಂದು ಸಚಿವ ಖಾದರ್ ತಾಕೀತು ಮಾಡಿದರು.
ಆಹಾರ ಮತ್ತು ಸುರಕ್ಷತೆ ಹಾಗೂ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಈ ಮೀನುಗಳ ಕುರಿತಂತೆ ಸಂಪೂರ್ಣ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ದ.ಕ. ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆಲ ದಿನಗಳ ಹಿಂದೆ ಕೆಂಬೇರಿ ಮೀನಿನ ತಲೆ ತಿಂದ ಪರಿಣಾಮವಾಗಿ ಕೆಲವರು ಅಸ್ವಸ್ಥರಾಗಿರುವ ಕುರಿತಂತೆ ತನಿಖೆ ನಡೆಯುತ್ತಿದ್ದು, ಅವರು ಸೇವಿಸಿದ ಮೀನು ದಕ್ಷಿಣ ಆಫ್ರಿಕಾದ ಆಳ ಸಮುದ್ರದ ಮೀನುಗಾರಿಕೆಯ ವೇಳೆ ಹಿಡಿಯಲ್ಪಟ್ಟವುಗಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಮೀನು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಮೀನು ಎಲ್ಲಿಂದ ತರಲಾಗಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಎಂದು ಮರೈನ್ ಅಥಾರಿಟಿಯ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದರು.
ಕೆಲವೊಂದು ಜಾತಿಯ ಮೀನಿನಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿರುವುದರಿಂದ ಆ ಮೀನುಗಳ ಸಂಸ್ಕರಣೆಯ ಬಗ್ಗೆ ಜಿಲ್ಲೆಯ ಮೀನು ಸಂಸ್ಕರಣಾ ಘಟಕಗಳು ಹೆಚ್ಚಿನ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಆ ಮೀನಿನ ವಿಷಕಾರಿ ಭಾಗಗಳು ಸಾರ್ವಜನಿಕರ ಕೈ ಸೇರದಂತೆ ಎಚ್ಚರಿಕೆ ವಹಿಸಬೇಕು. ವಿಷಕಾರಿ ಅಂಶಗಳಿರಬಹುದಾದ ಅಂತಹ ಮೀನಿನ ನಿರ್ದಿಷ್ಟ ಭಾಗಗಳನ್ನು ಘಟಕಗಳು ಸಂಸ್ಕರಿಸಿ ಕೇವಲ ಫರ್ಟಿಲೈಸರ್ ಆಗಿ ಮಾತ್ರವೇ ಬಳಕೆ ಮಾಡಬೇಕು.
ಯಾವುದೇ ಕಾರಣಕ್ಕೂ ಅವುಗಳು ಕ್ಯಾಂಟೀನ್‌ಗಳಿಗೂ ಹೋಗದಂತೆ ಗಮನ ಹರಿಸಬೇಕು. ಈ ಮುಂಜಾಗ್ರತಾ ಕ್ರಮಗಳನ್ನು ವಹಿಸದಿದ್ದಲ್ಲಿ ಅಂತಹ ಮೀನು ಸಂಸ್ಕರಣಾ ಘಟಕಗಳನ್ನು ನಿರ್ದಾಕ್ಷಿಣ್ಯವಾಗಿ ಮುಂದಿನ ದಿನಗಳಲ್ಲಿ ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಜಗದೀಶ್ ಎಚ್ಚರಿಸಿದರು.
Click this button or press Ctrl+G to toggle between Kannada and English