ದಸರಾ ನಾಡಹಬ್ಬ ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು,ಒಗ್ಗಟ್ಟು ಕ್ರೀಯಾಶೀಲತೆಯನ್ನು ಬೆಳೆಸುವಲ್ಲಿ ಸಹಾಯಕವಾಗಿದೆ: ಭಾರತೀ ಜೆ.ಶೆಟ್ಟಿ

10:33 AM, Tuesday, October 11th, 2016
Share
1 Star2 Stars3 Stars4 Stars5 Stars
(No Ratings Yet)
Loading...

Paivalike Dasara ಉಪ್ಪಳ: ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು,ಒಗ್ಗಟ್ಟು ಬೆಳೆಸುವಲ್ಲಿ ದಸರಾ ನಾಡಹಬ್ಬಗಳಂತಹ ಚಟುಟವಟಿಕೆಗಳು ಪೂರಕವಾಗಿದ್ದು,ಮಕ್ಕಳ ಕ್ರೀಯಾಶೀಲತೆಯನ್ನು ಬೆಳೆಸುವಲ್ಲಿ ಸಹಾಯಕವಾಗಿದೆಯೆಂದು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪೈವಳಿಕೆಯ ಗಡಿನಾಡ ಕಲಾಸಂಘ ಕಳೆದ 28 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ದಸರಾ ನಾಡಹಬ್ಬ ಮಹೋತ್ಸವದ ಅಂಗವಾಗಿ ಶನಿವಾರ ಪೈವಳಿಕೆನಗರ ಪ್ರೌಢಶಾಲೆಯಲ್ಲಿ ನಡೆದ ಪ್ರಸ್ತುತ ವರ್ಷದ ನಾಡಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆಡಳಿತಾತ್ಮಕವಾಗಿ ಕೇರಳದಲ್ಲಿದ್ದರೂ ಕಾಸರಗೋಡು,ಇಲ್ಲಿಯ ಜನಮನಸ್ಸುಗಳು ಇನ್ನೂ ಕನ್ನಡಕ್ಕಾಗಿ ಮಿಡಿಯುವಂತದ್ದಾಗಿದೆ.ಆದರೆ ಹೊಸ ತಲೆ ಮಾರು ಹಿರಿಯರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅರಿಯುವಲ್ಲಿ ಹಿಂದುಳಿಯುತ್ತಿದ್ದು,ಅವರನ್ನು ಎಚ್ಚರಿಸುವ ಹೊಣೆ ಇಂತಹ ಹಬ್ಬಾಚರಣೆಗಳಿಂದ ಸಾಧ್ಯವಾಗಬೇಕೆಂದು ತಿಳಿಸಿದರು.ನಮ್ಮ ಪರಂಪರೆ, ಸಂಸ್ಕೃತಿಯನ್ನು ಮರೆತಲ್ಲಿ ಭಾರೀ ಅಪಾಯಗಳಿದ್ದು, ದೇಶೀ ಸಂಸ್ಕೃತಿ,ಜೀವನ ಕ್ರಮಗಳಲ್ಲಿರುವ ನೆಮ್ಮದಿ ಬೇರೊಂದರಲ್ಲಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಚಣ್ಣ ಶೆಟ್ಟಿ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆಯವರು ಭಾರತದಲ್ಲಿ ದಸರಾ ಹಬ್ಬದ ಆರಂಭ, ಅದರ ಉದ್ದೇಶ, ಕರ್ನಾಟಕದಲ್ಲಿ ದಸರಾ ಹಬ್ಬದ ಆರಂಭ ಅದರ ಪೌರಾಣಿಕ ಹಾಗೂ ಚಾರಿತ್ರಿಕ ಹಿನ್ನಲೆ, ಸರಸ್ವತಿ ದೇವಿಗೆ ಶಿಲೆಯ ಪೀಠ ಹಾಗೂ ಲಕ್ಷ್ಮೀ ದೇವಿಗೆ ಕಮಲದ ಆಸನ ನೀಡಿರುವಲ್ಲಿ ಇರುವ ಸಂದೇಶ ಇತ್ಯಾದಿಗಳ ಕುರಿತು ಮಾತನಾಡಿ ಈ ನಾಡಹಬ್ಬವು ಮನುಷ್ಯ ಮನಸ್ಸಿನ ದುಷ್ಟ ಚಿಂತನೆಗಳನ್ನು ನಾಶಮಾಡಿ, ಉತ್ತಮ ಚಿಂತನೆಗಳನ್ನು ಬೆಳೆಸಲು ಸಹಾಯಕವಾಗಿದೆ ಎಂದರು.

Paivalike Dasara ಪೈವಳಿಕೆನಗರ ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕ ರವೀಂದ್ರನಾಥ್ ಕೆ ಆರ್ ಶುಭಹಾರೈಸಿದರು. ಗಡಿನಾಡ ಕಲಾಸಂಘದ ಕಾರ್ಯದರ್ಶಿ ರಾಘವ ಬಲ್ಲಾಳ್ ಸ್ವಾಗತಿಸಿ, ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ಪಿ ಮೊಹಮ್ಮದ್ ಧನ್ಯವಾದ ಸಮರ್ಪಿಸಿದರು. ಪೈವಳಿಕೆನಗರ ಪ್ರೌಢಶಾಲಾ ಕನ್ನಡ ಶಿಕ್ಷಕಿ ಶಶಿಕಲಾ ಕೆ ಕಾರ್ಯಕ್ರಮ ನಿರೂಪಿಸಿದರು. ನಂತರ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ವಿವಿಧ ಶಾಲೆಗಳ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English