ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಶೋಭಾಯಾತ್ರೆ

3:05 PM, Wednesday, October 12th, 2016
Share
1 Star2 Stars3 Stars4 Stars5 Stars
(No Ratings Yet)
Loading...

mangalore-dasara ಮಂಗಳೂರು: ಮಂಗಳೂರಿಗೆ ಮಂಗಳೂರೇ ವರ್ಣಮಯವಾಗಿ ಕಂಗೊಳಿಸಿ- ವಿಜೃಂಭಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಶೋಭಾಯಾತ್ರೆ ಭಾರೀ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ, ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ಸಂಜೆ ಆರಂಭವಾಗಿ ಬುಧವಾರ ಮುಂಜಾನೆ ಸಂಪನ್ನಗೊಂಡಿತು.

ಶ್ರೀ ಕ್ಷೇತ್ರದಿಂದ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶಾರದಾ ಮಾತೆ, ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ವಿಗ್ರಹಗಳ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ಕುದ್ರೋಳಿಯಿಂದ ಹೊರಟು ಕಂಬಾರ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಸರ್ಕಲ್‌, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ಸರ್ಕಲ್‌, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್‌, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ತಲುಪಿತು. ಪ್ರಮುಖ ಬೀದಿಗಳಲ್ಲಿ 9 ಕಿ.ಮೀ. ಸಾಗಿ ಬುಧವಾರ ಬೆಳಗ್ಗಿನ ಜಾವ ಶ್ರೀ ಕ್ಷೇತ್ರಕ್ಕೆ ಹಿಂದಿರುಗಿತು.

ಶೋಭಾಯಾತ್ರೆ ಆರಂಭಕ್ಕೆ ಮೊದಲು ಶ್ರೀ ಶಾರದೆಯ ಸನ್ನಿಧಿಯಲ್ಲಿ ಜನಾರ್ದನ ಪೂಜಾರಿ ಅವರು ಹಲವು ಸೇವಾಕರ್ತರನ್ನು ಸಮ್ಮಾನಿಸಿದರು. ಶಾಸಕ ಲೋಬೋ, ಕುದ್ರೋಳಿ ಕ್ಷೇತ್ರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಯ ಸಿ. ಸುವರ್ಣ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಖಜಾಂಚಿ ಪದ್ಮರಾಜ್‌ ಆರ್‌. ಸದಸ್ಯರಾದ ಬಿ.ಕೆ. ತಾರಾನಾಥ್‌, ರವಿಶಂಕರ್‌ ಮಿಜಾರ್‌, ಕೆ. ಮಹೇಶ್ಚಂದ್ರ, ಅಭಿವೃದ್ಧಿ ಮಂಡಳಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್‌, ಕೆ. ಚಿತ್ತರಂಜನ್‌ ಗರೋಡಿ, ಪ್ರಮುಖರಾದ ರಾಧಾಕೃಷ್ಣ, ಕಳ್ಳಿಗೆ ತಾರಾನಾಥ ಶೆಟ್ಟಿ, ಪದ್ಮನಾಭ ಕೋಟ್ಯಾನ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

mangalore-dasara ಕುದ್ರೋಳಿ ಕ್ಷೇತ್ರದ ಈ ಬಾರಿಯ ಮಂಗಳೂರು ದಸರಾ ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ ಸರ್ವರನ್ನೂ ಶ್ಲಾಘಿಸುವುದಾಗಿ ಬಿ. ಜನಾರ್ದನ ಪೂಜಾರಿ ಹೇಳಿದರು. ಸರ್ವಧರ್ಮ ಸಮನ್ವಯದ ಸಂದೇಶವನ್ನು ಬ್ರಹ್ಮಶ್ರೀ ನಾರಾಯಣ ಗುರು ನೀಡಿದ್ದಾರೆ. ಈ ಸಂದೇಶವನ್ನು ಕುದ್ರೋಳಿ ಕ್ಷೇತ್ರದಲ್ಲಿ ಅನುಷ್ಠಾನಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇರುವುದು ಶ್ರೀ ಕ್ಷೇತ್ರದ ಧಾರ್ಮಿಕ ಸೇವಾ ಕಾರ್ಯಗಳ ಬಗ್ಗೆ ಭಕ್ತರಿಗಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.

ಕರಾವಳಿಯ ವಿವಿಧ ಪುಣ್ಯಕ್ಷೇತ್ರಗಳಿಂದ ಪ್ರವರ್ತಿತ ಧಾರ್ಮಿಕ-ಸಾಂಸ್ಕೃತಿಕ ಸ್ತಬ್ಧಚಿತ್ರ, ಹುಲಿ ವೇಷ, ನೃತ್ಯ ರೂಪಕಗಳು, ದೇಶದ ಪರಂಪರೆಯ ಟ್ಯಾಬ್ಲೋಗಳು, ತ್ರಿಶೂರಿನ ಬಣ್ಣದ ಕೊಡೆ, ಕೇರಳದ ಚೆಂಡೆವಾದ್ಯ, ಕಲ್ಲಡ್ಕ ಶಿಲ್ಪಾಗೊಂಬೆ, ಬೆಂಗಳೂರಿನ ವಾದ್ಯತಂಡ, ಮಹಾರಾಷ್ಟ್ರದ ಡೋಲು ನೃತ್ಯ, ಆಂಧ್ರದ ಬಾಲಮುರಳೀಕೃಷ್ಣ ಕೋಲಾಟ, ಬಾಗಲಕೋಟೆಯ ನಂದಿಕೇಧಿಶ್ವರ ತಂಡದ ಹೋರಿಯ ಜತೆಗಿನ ಕಸರತ್ತು, ಕರ್ನಾಟಕದ ಜಾನಪದ ವೈವಿಧ್ಯ… ಹೀಗೆ ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ತುಂಬಿತು. ರಾಜ್ಯದ ವಿವಿಧ ಸಾಂಸ್ಕೃತಿಕ ಕಲಾತಂಡಗಳು, ವೈವಿಧ್ಯಮಯ ಸುಮಾರು 75ಕ್ಕೂ ಅಧಿಕ ಟ್ಯಾಬ್ಲೋಗಳು ಮೆರವಣಿಗೆಗೆ ಸೊಬಗು ನೀಡಿದವು. ಶೋಭಾಯಾತ್ರೆ ಉದ್ದಕ್ಕೂ ಸೇರಿದ ಅಪಾರ ಜನಸ್ತೋಮ ಇದನ್ನು ಕಂಡು ಸಂಭ್ರಮಿಸಿದರು. ಪರಿಣಾಮ ನಗರದ ರಸ್ತೆ ತುಂಬೆಲ್ಲ ಜನಜಾತ್ರೆಯೇ ಮೇಳೈಸಿತು.

mangalore-dasara-3

mangalore-dasara-4

mangalore-dasara-5

mangalore-dasara-6

mangalore-dasara-7

mangalore-dasara

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English