ಕನ್ನಡ ಕೆಲಸಕ್ಕೆ ಅರ್ಪಿಸಿಕೊಂಡ ಸಾಧನೆಗಳ ದಾಖಲಾತಿ ಅಗತ್ಯ : ಧರ್ಮದರ್ಶಿ ಹರಿಕೃಷ್ಣ ಪುನರೂರು

4:17 PM, Monday, October 17th, 2016
Share
1 Star2 Stars3 Stars4 Stars5 Stars
(No Ratings Yet)
Loading...

Shivarama Kasaragodu ಕಾಸರಗೋಡು: ಎಳವೆಯಲ್ಲೇ ಕನ್ನಡ ಕಳಕಳಿಯೊಂದಿಗೆ ಕನ್ನಡ ಕೆಲಸಕ್ಕೆ ಅರ್ಪಿಸಿಕೊಂಡ ಶಿವರಾಮ ಕಾಸರಗೋಡು ಅವರ ಸಾಧನೆ ದಾಖಲಾಗಬೇಕು. ಈ ಮೂಲಕ ಕಾಸರಗೋಡಿನ ಸಹಿತ ಕನ್ನಡನಾಡಿನಲ್ಲಿ ಕನ್ನಡ ಕಟ್ಟುವ ಕೆಲಸಕ್ಕೆ ಪ್ರೇರಣೆಯಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯ ವ್ಯಕ್ತಪಡಿಸಿದರು.

ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಶನಿವಾರ ಸಂಜೆ ಆಯೋಜಿಸಿದ ಕನ್ನಡದ ಸೇವಕ, ಸಾಹಿತ್ಯಕ – ಸಾಂಸ್ಕೃತಿಕ ಸಂಘಟಕ, ರಜತ ಸಂಭ್ರಮದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಶಿವರಾಮ ಕಾಸರಗೋಡು – 50 ಅಭಿನಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿವರಾಮ ಕಾಸರಗೋಡು – 50 ಅದರ ಅಂಗವಾಗಿ ಅಭಿನಂದನೆ ಸಮಿತಿ ಹೊರತಂದ ಅಭಿನಂದನ ಕೃತಿ ‘ಚಂದನ’ ಸಂಪುಟವನ್ನು ಬಿಡುಗಡೆಗೊಳಿಸಿದ ಅವರು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಬೆಳೆದ ಪರಿ ಅಚ್ಚರಿ ಮೂಡಿಸುತ್ತಿದೆ. ನಾನು ಮತ್ತು ಶಿವರಾಮ ಕಾಸರಗೋಡು ಜೊತೆಯಾಗಿ ಕನ್ನಡದ ಕೆಲಸವನ್ನು ಮಾಡಿದ್ದೇವೆ. ಶಿವರಾಮ ಕಾಸರಗೋಡು ಕೈಯಾಡಿಸದ ಕ್ಷೇತ್ರಗಳಿಲ್ಲ. ನಿಸ್ವಾರ್ಥ ಸೇವಕರನ್ನು ಸಮಾಜ ಗುರುತಿಸುತ್ತದೆ. ಅದಕ್ಕೆ ಸ್ಪಷ್ಟ ಉದಾಹರಣೆ ಶಿವರಾಮ ಕಾಸರಗೋಡು ಅವರ ಅಭಿನಂದನಾ ಸಮಾರಂಭ ಎಂದ ಅವರು ಶಿವರಾಮ ಕಾಸರಗೋಡು ಕಾಸರಗೋಡಿಗೆ ಹೆಮ್ಮೆ ಎಂದರು.

Shivarama Kasaragodu ಅಭಿನಂದನಾ ಭಾಷಣ ಮಾಡಿದ ಮಂಗಳೂರು ಬಾನುಲಿ ನಿಲಯದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಅವರು,ತನ್ನೊಡನೆ ಇತರರನ್ನೂ ಬೆಳೆಸುವುದು,ಪ್ರಧಾನ ಭೂಮಿಕೆಗೊಯ್ಯುವುದು ಓರ್ವ ಸಂಘಟಕನ ಯಶಸ್ವಿ ನಾಯಕತ್ವ ಸಂಕೇತವಾಗಿದ್ದು,ಗಡಿನಾಡು ಕಾಸರಗೋಡಲ್ಲಿ ಶಿವರಾಮ ಕಾಸರಗೋಡು ಇಂತಹ ಸಾಧನಾಶೀಲರು ಎಂದು ತಿಳಿಸಿದರು.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಕನ್ನಡದ ಧ್ವನಿಯನ್ನು ಮೊಳಗಿಸಿದವರು. ಅವರ ಕನ್ನಡದ ಬಗೆಗಿನ ತೀವ್ರ ಕಾಳಜಿ ಉಲ್ಲೇಖನೀಯ ಮತ್ತು ಶ್ಲಾಘನೀಯ. ಡಾ.ಕಯ್ಯಾರರ ಜೊತೆಯಲ್ಲಿ ಶಿವರಾಮ ಕಾಸರಗೋಡು ಅವರ ಹೆಸರು ಕೇಳಿ ಬರುತ್ತಿರುವುದು ಹೆಮ್ಮೆಯ ವಿಷಯ. ೨೮ ವರ್ಷಗಳಿಂದ ಪ್ರಾಮಾಣಿಕವಾದ ಕನ್ನಡ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಕನ್ನಡ ಗ್ರಾಮವನ್ನು ಕಟ್ಟುವ ಕೆಲಸದ ಮೂಲಕ ಕನ್ನಡದ ಕಂಪನ್ನು ಪಸರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಸಮಾಜಮುಖಿ ತುಡಿತ ಅವರಲ್ಲಿ ರಕ್ತಗತವಾಗಿದೆ ಎಂದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಆಯಿಷಾ ಎ.ಎ.ಪೆರ್ಲ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ್ ರೈ ಮಾಸ್ತರ್, ನಿವೃತ್ತ ಬ್ಯಾಂಕ್ ಅಧಿಕಾರಿ ಅಶೋಕ್ ಕುಮಾರ್ ಮಂಗಳೂರು, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾಸಂಘ ಜಿಲ್ಲಾ ಅಧ್ಯಕ್ಷ ನಿರಂಜನ ಕೊರಕೋಡು, ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಕ್, ಪ್ರೊ.ಎ.ಶ್ರೀನಾಥ್ ಕಾಸರಗೋಡು, ಎಸ್.ಎಲ್.ಭಾರದ್ವಾಜ್, ಲವ ಮೀಪುಗುರಿ ಮೊದಲಾದವರು ಅಭಿನಂದಿಸಿ ಮಾತನಾಡಿದರು. ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಅಭಿನಂದನಾ ಗ್ರಂಥ ‘ಚಂದನ’ ದ ಬಗ್ಗೆ ಮಾತನಾಡಿದರು.

Shivarama Kasaragodu ಶಿವರಾಮ ಕಾಸರಗೋಡು – 50 ಅಭಿನಂದನೆ ಸಮಿತಿ ಅಧ್ಯಕ್ಷ ರಾಮಪ್ಪ ಎಂ.ಪಿ.ಮಂಜೇಶ್ವರ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ರಚಿಸಿದ ಶಿವರಾಮ ಕಾಸರಗೋಡು ಬಗೆಗಿನ ಕವನವನ್ನು ಖ್ಯಾತ ಭಾಗವತ ಶಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಯಕ್ಷಗಾನ ಶೈಲಿಯ ಗಾಯನದಲ್ಲಿ ಹಾಡಿದರು. ವೇದಿಕೆಯಲ್ಲಿ ದಿವಾಕರ ಪಿ.ಅಶೋಕನಗರ, ಪುರುಷೋತ್ತಮ ನಾಕ್ ಮೊದಲಾದವರಿದ್ದರು.

ಅಭಿನಂದನೆ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಅಭಿನಂದನಾ ಗ್ರಂಥದ ಸಂಪಾದಕ ಮಂಡಳಿಯ ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂದೇಶ್ ಕೋಟೆಕಣಿ ವಂದಿಸಿದರು.

ಅಭಿನಂದನಾ ಸಮಾರಂಭದ ಬಳಿಕ ಸ್ಥಳೀಯರಿಂದ ನೃತ್ಯ ಹಾಗೂ ಯಕ್ಷಗಾನ ಭೀಷ್ಮ ಡಾ.ಶೇಣಿ ಗೋಪಾಲಕೃಷ್ಟ ವಿರಚಿತ ‘ಶ್ರೀಮತಿ ಪರಿಣಯ’ ಪ್ರಸಂಗದ ಯಕ್ಷಗಾನ ಪ್ರದರ್ಶನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ನಿರ್ದೇಶನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಶಿರಿಬಾಗಿಲು ರಾಮಕೃಷ್ಣ ಮಯ್ಯ,ರಜನೀಶ್ ಪಡುಬಿದ್ರೆ,ಗೋಪಾಲಕೃಷ್ಣ ನಾವುಡ ಮಧೂರು,ಹಾಗೂ ಮುಮ್ಮೇಳದಲ್ಲಿ ಮಧೂರು ರಾಧಾಕೃಷ್ಣ ನಾವುಡ,ಗಂಗಾಧರ ಪುತ್ತೂರು,ಮಹೇಶ್ ಮಣಿಯಾಣಿ ದೊಡ್ಡತೋಟ,ಬಾಲಕೃಷ್ಣ ಮಣಿಯಾಣಿ ಮವ್ವಾರು,ಬಾಲಕೃಷ್ಣ ಸೀತಾಂಗೋಳಿ,ಲತಾ ಪ್ರಕಾಶ್,ಚಂದ್ರಮೋಹನ,ಅರುಣ್ ಮೊದಲಾದವರು ವಿವಿಧ ಪಾತ್ರಗಳ ಮೂಲಕ ಯಕ್ಷ ರಸದೌತಣ ನೀಡಿದರು.

ಕನ್ನಡ ಪರ ಹೋರಾಟಕ್ಕೆ ನಿತ್ಯ ಬೆಂಬಲ : ಶಾಸಕ ಎನ್.ಎ.ನೆಲ್ಲಿಕುನ್ನು
ಕಾಸರಗೋಡು: ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಅರಿವಿದೆ. ಯುಡಿಎಫ್ ಸರಕಾರ ಮಲಯಾಳವನ್ನು ಕಡ್ಡಾಯಗೊಳಿಸಿದಾಗ ವಿಧಾನಸಭೆಯಲ್ಲಿ ಈ ಬಗ್ಗೆ ತಿದ್ದುಪಡಿ ತರಲು ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಾಸಕ ಎನ್ ಎ ನೆಲ್ಲಿಕುನ್ನು ತಿಳಿಸಿದರು.

ಕಾಸರಗೋಡಿನಲ್ಲಿ ಮಲಯಾಳ ಮಾತ್ರವಲ್ಲ. ವಿವಿಧ ಭಾಷೆಗಳನ್ನಾಡುವವರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಸರಗೋಡನ್ನು ಮಲಯಾಳ ಕಡ್ಡಾಯ ಆದೇಶದಿಂದ ಹೊರತುಪಡಿಸುವಂತೆ ವಿಧಾನಸಭೆಯಲ್ಲಿ ಧ್ವನಿಯೆತ್ತಿದ್ದು, ಮುಂದೆಯೂ ಕನ್ನಡಿಗರಿಗೆ ಅನ್ಯಾಯವಾದಲ್ಲಿ ಕನ್ನಡ ಪರ ಹೋರಾಟದಲ್ಲಿ ನಾನೂ ಇರುತ್ತೇನೆ ಎಂದರು.

ಕನ್ನಡದ ಬಗೆಗಿನ ಕಾಳಜಿಯಿಂದ ಕನ್ನಡ ಕೆಲಸಕ್ಕೆ ಅರ್ಪಿಸಿಕೊಂಡ ಶಿವರಾಮ ಕಾಸರಗೋಡು ಅವರನ್ನು ಅಭಿನಂದಿಸಿದ ಅವರು ಕನ್ನಡ ಗ್ರಾಮವನ್ನು ಕಟ್ಟುವ ಕನಸನ್ನು ಸಾಕಾರಮಾಡಲು ತನ್ನ ಹಿರಿಯರಿಂದ ಬಂದ 20 ಸೆಂಟ್ಸ್ ಸ್ಥಳವನ್ನು ದಾನಮಾಡಿರುವ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಇದು ಅವರಲ್ಲಿರುವ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಮೇಲಿರುವ ಕಳಕಳಿಗೆ ಸ್ಪಷ್ಟ ಉದಾಹರಣೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English