ಚಲೋ ಉಡುಪಿ’ ಹಾದಿ ತಪ್ಪಿದೆ, ಮೂಲ ಉದ್ದೇಶವನ್ನು ಮರೆತ ಚಲೋ ಉಡುಪಿ: ಲೋಲಾಕ್ಷ

11:49 AM, Wednesday, October 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

Lokakshaಮಂಗಳೂರು: ‘ಚಲೋ ಉಡುಪಿ’ ಹಾದಿ ತಪ್ಪಿದೆ, ಮೂಲ ಉದ್ದೇಶವನ್ನು ಮರೆತು ಕೃಷ್ಣ ಮಠದ ವಿಷಯವನ್ನು ಅನಗತ್ಯವಾಗಿ ಎಳೆದು ತರಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಕಳವಳ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಲೋ ಉಡುಪಿ’ ಹಾದಿ ತಪ್ಪಿರುವ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದಲಿತರ ಸ್ವಾಭಿಮಾನಿ ಹೋರಾಟ ಸಮಿತಿ ಇತ್ತೀಚೆಗೆ ನಡೆಸಿದ ಚಲೋ ಉಡುಪಿ ತನ್ನ ಮೂಲ ಉದ್ದೇಶವನ್ನೇ ಮರೆತಿದೆ. ಚಲೋ ಉಡುಪಿ ಹೋರಾಟದಿಂದ ದಲಿತರ ಆದ್ಯತೆಯ ವಿಚಾರ ಸ್ಥಾನಪಲ್ಲಟಗೊಂಡಿದೆ.

ಆ ಕಾರ್ಯಕ್ರಮದ ಘೋಷವಾಕ್ಯ ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬುದಾಗಿತ್ತು. ಆದರೆ ಈ ವಿಚಾರಕ್ಕೆ ಆದ್ಯತೆಯನ್ನು ನೀಡದೆ ಕೃಷ್ಣ ಮಠದ ವಿಷಯವನ್ನು ಅನಗತ್ಯ ಎಳೆದು ತರಲಾಗಿದೆ. ಮಠದಲ್ಲಿನ ಪಂಕ್ತಿಭೇದವನ್ನು ಎರಡು ತಿಂಗಳಲ್ಲಿ ನಿಲ್ಲಿಸದಿದ್ದರೆ ಮುತ್ತಿಗೆ ಹಾಕಲಾಗುವುದು ಎಂದು ಸಮಾರೋಪದಲ್ಲಿ ಜಿಗ್ನೇಶ್ ಮೆವಾನಿ ಹೇಳಿದ್ದಾರೆ. ಇದು ಹೋರಾಟದ ದಿಕ್ಕಿನಲ್ಲಿ ಸ್ಪಷ್ಟತೆ ಇಲ್ಲದಿರುವುದನ್ನು ತೋರಿಸುತ್ತದೆ ಎಂದರು.

ಜಿಗ್ನೇಶ್ ಹೇಳಿಕೆ ಕೃಷ್ಣ ಮಠದ ಆಡಳಿತ ಮಂಡಳಿಯ ಮೂಲಭೂತ ಹಕ್ಕುಗಳ ಮೇಲಿನ ಅತಿಕ್ರಮಣದ ಬೆದರಿಕೆಯಾಗಿದೆ. ಇದು ಅತ್ಯಂತ ಅನಪೇಕ್ಷಿತ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ದಲಿತರಿಗೂ ಉಡುಪಿ ಮಠಕ್ಕೆ ಏನು ಸಂಬಂಧ? ಮಠದ ವಿಚಾರದಲ್ಲಿ ದಲಿತರು ಯಾಕೆ ಹಸ್ತಕ್ಷೇಪ ಮಾಡಬೇಕು? ಅಲ್ಲಿ ಪಂಕ್ತಿಭೇದ ಇದ್ದರೂ ಇಲ್ಲದಿದ್ದರೂ ನನ್ನದೇನು ತಕರಾರು ಇಲ್ಲ. ಅದು ಅವರ ಮಠ, ಅದರ ನಿರ್ವಹಣೆ ಅವರದ್ದು, ನಾವು ಹಸ್ತಕ್ಷೇಪ ಮಾಡುವುದು ಸರಿಯಲ್ಲ.

ಪೇಜಾವರ ಸ್ವಾಮೀಜಿಯರು ಹೇಳಿದಂತೆ ಉಳಿದ ಕಡೆಗಳಲ್ಲಿ ಪಂಕ್ತಿಭೇದ ಇದ್ದರೆ ಅದನ್ನು ನಿಲ್ಲಿಸಬೇಕು. ಮಠದಲ್ಲಿ ಅಥವಾ ಬೇರೆ ದೇವಸ್ಥಾನಗಳಲ್ಲಿ ಪಂಕ್ತಿಭೇದ ಇದ್ದರೆ ಅದನ್ನು ಸರ್ಕಾರದಲ್ಲಿ ಪ್ರಶ್ನಿಸಬೇಕೇ ಹೊರತು ಮುತ್ತಿಗೆ ಹಾಕುವುದರಿಂದ ಪ್ರಯೋಜನವಾಗದು. ಅದಕ್ಕಾಗಿ ಪಂಕ್ತಿಭೇದ ನಿಷೇಧ ಕಾಯ್ದೆಯನ್ನು ತರಲಿ. ಮುತ್ತಿಗೆ, ಹೋರಾಟಗಳೇ ಮುಂದುವರಿದರೆ ಸಮಾಜದೊಳಗೆ ಸಂಘರ್ಷ ಸೃಷ್ಟಿಯಾಗಿ ಸಾಮಾಜಿಕ ಸಾಮರಸ್ಯಕ್ಕೆ ಅಡ್ಡಿಯಾದೀತು ಎಂದು ಎಚ್ಚರಿಸಿದರು.

ಮಠದ ಮೇಲೆ ಬೆದರಿಕೆ ಹಾಕಿರುವ ಕ್ರಮ ಸರಿಯಲ್ಲ. ಇದಕ್ಕೆ ಪ್ರತೀಕಾರವಾಗಿ ಹಿಂದೂ ಸಂಘಟನೆಗಳು ಉಡುಪಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳುವುದು ಸಮಂಜಸವಲ್ಲ. ದಲಿತರು ನೋವು ಹೇಳಿಕೊಂಡರೆ ಧರ್ಮರಕ್ಷಕರು ಹಿಂದೂ ಸಮಾಜದಲ್ಲಿನ ನ್ಯೂನ್ಯತೆಯನ್ನು ಸರಿಪಡಿಸಬೇಕು. ಅಷ್ಟಕ್ಕೂ ದಲಿತರಿಗೂ ಗೋಮಾಂಸಕ್ಕೂ ಇದಕ್ಕೂ ಸಂಬಂಧವಿಲ್ಲ. ಹೊರಗಿನಿಂದ ಬಂದವರು ಚಳುವಳಿಗೆ ಸಂಬಂಧವೇ ಇಲ್ಲದ ವಿಚಾರವನ್ನು ಮಾತನಾಡಿದ್ದಾರೆ. ರಾಜ್ಯದಲ್ಲಿರುವ ದಲಿತರಿಗೆ ಗೋಮಾಂಸ ವಿವಾದವೇ ಅಲ್ಲ. ಇನ್ನೊಬ್ಬರ ಹಕ್ಕು ಕಸಿಯುವುದಕ್ಕಾಗಿ ಹೋರಾಡುವ ಅಗತ್ಯ ಇಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English