ಮಂಗಳೂರು : ಪಂಜಿ ಮೊಗರಿನ ತಾಯಿ-ಮಗಳ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಘಟಕದ ವತಿಯಿಂದ ಭಾನುವಾರ ಕಾವೂರು ಜಂಕ್ಷನ್ ಬಳಿ ಧರಣಿ ನಡೆಸಲಾಯಿತು. ಅದಕ್ಕೂ ಮೊದಲು ಪಂಜಿಮೊಗರಿನಿಂದ ಕಾವೂರು ಜಂಕ್ಷನ್‌ವರೆಗೆ ಮೆರವಣಿಗೆ ನಡೆಸಲಾಯಿತು.
ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಮಂಗಳೂರು ಪೊಲೀಸರಿಗೆ ಕೊಲೆ ನಡೆದು ತಿಂಗಳು ಕಳೆದರೂ ಕೊಲೆಯ ಕಾರಣ ಹಾಗೂ ಕೊಲೆಗಾರರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮಂಗಳೂರು ಪೊಲೀಸರಿಂದ ವರ್ಷ ಕಳೆದರೂ ಈ ಪ್ರಕರಣ ಭೇದಿಸಲು ಸಾದ್ಯವಿಲ್ಲ, ಸಿಬಿಐ ಅಥವಾ ಸಿಓಡಿಯಂತಹ ಸ್ವತಂತ್ರ ತನಿಖಾ ತಂಡದಿಂದ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಸಚಿವ ಕೃಷ್ಣ ಪಾಲೆಮಾರ್‌ರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಕೃಷ್ಣ ಪಾಲೆಮಾರ್ ಬೆಂಗಳೂರಿನ ಅಶೋಕಾ ಹೊಟೇಲ್‌ನಲ್ಲಿ ಮೋಜು ಮಾಡುತ್ತಿದ್ದಾರೆ. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಈ ಕೊಲೆ ನಡೆದಿದ್ದರೂ ಅವರು ಈ ಬಗ್ಗೆ ಒಂದೇ ಒಂದು ಮಾತೂ ಆಡಿಲ್ಲ. ಎಂದು ಆರೋಪಿಸಿದ ಮುನೀರ್, ಯುವ ವಕೀಲ ಪ್ರೀತಂ ನಾಪತ್ತೆ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು. ಕೊಲೆ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗುತ್ತಿರುವುದರಿಂದ ದುಷ್ಕೃತ್ಯ ನಡೆಸುವವರಿಗೆ ಇನ್ನಷ್ಟು ಧೈರ್ಯ ಬರುತ್ತದೆ ಅಲ್ಲದೆ. ಕೊಲೆ ಪ್ರಕರಣ ಬಯಲಾಗುವ ವರೆಗೆ ಕುಟುಂಬದವರೂ ಸೇರಿದಂತೆ ನಿರಪರಾಧಿಗಳೂ ಸಮಾಜದ ಸಂಶಯದ ಸುಳಿಗೆ ಸಿಲುಕುವಂತಾಗಿದೆ. ಆದುದರಿಂದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಸ್ಥಳೀಯ ಮುಖಂಡ ಕ್ಲೆವರ್ ಡಿಸೋಜಾ ಮಾತನಾಡಿ, ಕೊಲೆಗಾರರು ಪತ್ತೆಯಾಗದಿರುವುದು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ದುಷ್ಕರ್ಮಿಗಳು ಯಾರ ಮನೆಗೆ ಯಾವಾಗ ನುಗ್ಗುತ್ತಾರೆ ಎಂಬ ಆತಂಕ ಕಾಡುವಂತಾಗಿದೆ. ಆದುದರಿಂದ ಪ್ರಕರಣದ ನೈಜ ಕಾರಣ ಹಾಗೂ ಆರೋಪಿಗಳು ಬೆಳಕಿಗೆ ಬರಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ದಯಾನಂದ ಶೆಟ್ಟಿ, ಪಂಜಿಮೊಗರು ಘಟಕದ ಅಧ್ಯಕ್ಷ ಬಶೀರ್ ಅಹ್ಮದ್, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಸಾಜಿದಾ ಅತ್ತಾವರ್, ಕಾವೂರು ಘಟಕದ ರುಕ್ಮಿಣಿ ಮತ್ತಿತರರು ಸಭೆಯಲ್ಲಿ ಮಾತನಾಡಿದರು.
Click this button or press Ctrl+G to toggle between Kannada and English