ಬೆಳ್ತಂಗಡಿ: ಜನರ ಧಾರ್ಮಿಕ ಭಾವನೆಗೆ ಅನುಗುಣವಾಗಿ ಸಾಮಾಜಿಕ ಚಿಂತನೆ ಹಾಗೂ ಕಳಕಳಿಯಿಂದ ಕೆಲಸ ಮಾಡುವ ಧರ್ಮಸ್ಥಳ ಧರ್ಮ ಪ್ರೇರಣೆಯಲ್ಲಿ ಮಾದರಿಯಾಗಿದೆ ಎಂದು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದ್ದಾರೆ.
ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 49ನೇ ಪಟ್ಟಾಭಿಷೇಕ ವರ್ಧಂತಿಯಲ್ಲಿ ಮಾತನಾಡಿದರು.
ವೀರೇಂದ್ರ ಹೆಗ್ಗಡೆಯವರು ಭಾರತಮಾತೆಯ ಹೆಮ್ಮೆಯ ಪುತ್ರ. ಕ್ಷೇತ್ರದ ಮೂಲಕ ಅನೇಕ ಚಟುವಟಿಕೆಗಳನ್ನು ನಡೆಸಿ ಗ್ರಾಮಾಂತರ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸ್ತ್ರೀಶಕ್ತಿ ಸಂಘಟನೆಗಳ ಮೂಲಕ ಲಕ್ಷಾಂತರ ಮಹಿಳೆಯರಲ್ಲಿ ಆರ್ಥಿಕ ಅಧಿಕಾರ ನೀಡಿ ರಾಷ್ಟ್ರದಲ್ಲೇ ಪ್ರಥಮವಾಗಿ ಆರ್ಥಿಕ ಜಾಗೃತಿ ಮೂಡಿಸಿದ್ದಾರೆ. ಶೌಚಾಲಯ ಜಾಗೃತಿ, ಗ್ರಾಮಾಭಿವೃದ್ಧಿ, ದೇಗುಲ ಅಭಿವೃದ್ಧಿ ಹೀಗೆ ಅನೇಕ ವಿಚಾರದಲ್ಲಿ ಅವರು ಪ್ರೇರಕರಾಗಿದ್ದಾರೆ ಎಂದರು.
5 ಬಾರಿ ಗೆದ್ದ ವಸಂತ ಬಂಗೇರ ಅವರು ಸಚಿವರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ನನಗೆ ಸಚಿವ ಪದವಿ ನಿರೀಕ್ಷೆ ಇರಲಿಲ್ಲ. ಆದರೆ ದೇವರ ದಯೆಯಿಂದ ನಾನು ಬಯಸದೇ ಸಚಿವನಾದೆ ಎಂದು ಲಮಾಣಿ ಹೇಳಿದರು.
ರಾಜ್ಯಸಭಾ ಸದಸ್ಯ, ಬೆಳಗಾವಿ ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಪ್ರಭಾಕರ ಕೋರೆ, ಕರ್ನಾಟಕದ ಕೊನೆಯ ಹಳ್ಳಿಯಲ್ಲೂ ಹೆಗ್ಗಡೆಯವರ ಪ್ರಭಾವ ಇದೆ. ಶಿಕ್ಷಣದ ಮಹತ್ವವನ್ನು ಅರಿತು ಅವರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಕಲೆ, ಸಂಸ್ಕೃತಿ, ಪರಂಪರೆ ರಕ್ಷಣೆಯ ಕೈಂಕರ್ಯ ಮಾಡುತ್ತಾ ಮುಂದಿನ ಪೀಳಿಗೆಗೆ ಉಳಿಸಿ ಅದನ್ನು ದಾಟಿಸುವ ಕೆಲಸ ಮಾಡುತ್ತಿದ್ದಾರೆ. ಇಂದೇ ಪರಂಪರೆ ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಕಷ್ಟ. ಗ್ರಾಮೀಣ ಜನ ಇಂದು ಧರ್ಮಸ್ಥಳದಿಂದಾಗಿ ಜಾಗೃತರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ವೀರೇಂದ್ರ ಹೆಗ್ಗಡೆಯವರ ಪಟ್ಟವಾದ ಬಳಿಕ ಹತ್ತು ಹಲವು ಜನಪರ ಯೋಜನೆಗಳಿಂದಾಗಿ ಧರ್ಮಸ್ಥಳದ ಖ್ಯಾತಿ ಉತ್ತುಂಗಕ್ಕೆ ಏರಿತು ಎಂದರು.
ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣ ಧರ್ಮದ ರಕ್ಷಣೆ ಆಚರಣೆಯಿಂದ ಸಾಧ್ಯ ಎಂದು ಧರ್ಮಸ್ಥಳ ನಂಬಿಕೆ ಇಟ್ಟು ಕೆಲಸ ಮಾಡುತ್ತಿದೆ. ಹೊಣೆಗಾರಿಕೆ, ಜವಾಬ್ದಾರಿ, ನಿರ್ವಹಣೆ ಸರಿಯಾಗಿದ್ದರೆ ಸಂಸಾರ ಹಾಗೂ ಸಮಾಜ ಸರಿ ದಾರಿಯಲ್ಲಿರುತ್ತದೆ. ಧರ್ಮ ಇದ್ದರೆ ಸುಖೀ ಸಮಾಜ ನಿರ್ಮಾಣವಾಗುತ್ತದೆ. ಅಮೆರಿಕದಂತಹ ರಾಷ್ಟ್ರಗಳಲ್ಲಿ ಕೂಡ ಭಗವಂತನ ಮೇಲೆ ನಂಬಿಕೆ ಇಟ್ಟೇ ಕೆಲಸ ಮಾಡುತ್ತಾರೆ. ಶಿಸ್ತು, ಸಹಕಾರ, ಸಹಬಾಳ್ವೆ, ಸಮನ್ವಯತೆಯೇ ರಾಮರಾಜ್ಯದ ಕಲ್ಪನೆ ಎಂದರು.
ನಂಬಿಕೆ ಇರಲಿ, ಮೂಢನಂಬಿಕೆ ಬೇಡ. ಇದರಿಂದ ಸಮಾಜ ಹಾದಿ ತಪ್ಪುತ್ತದೆ ಎಂದ ಡಾ| ಹೆಗ್ಗಡೆ, ಕ್ಷೇತ್ರದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಿವಿಧ ವಿಚಾರಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಯೋಜನೆಯಲ್ಲಿ 35 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ರುಡ್‌ಸೆಟ್ ಮೂಲಕ 20 ಲಕ್ಷ ಮಂದಿಗೆ ಸ್ವ ಉದ್ಯೋಗಕ್ಕೆ ತರಬೇತಿ ನೀಡಲಾಗಿದೆ. ದೇಗುಲಗಳ ಜೀರ್ಣೋದ್ಧಾರಕ್ಕೆ ಈ ವರ್ಷ 10 ಕೋ.ರೂ. ನೀಡಲಾಗಿದೆ. ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ವಾರ್ಷಿಕ 4.45 ಲಕ್ಷ ಹೊರರೋಗಿಗಳು, 4,800 ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಹೆಗ್ಗಡೆ ಹೇಳಿದರು.
ರಾಜ್ಯದ ಮುಜರಾಯಿ ದೇಗುಲಗಳ ಸ್ವತ್ಛತೆಗೆ ಸರಕಾರ ಕ್ರಮ ತೆಗೆದುಕೊಳ್ಳುವುದಾದರೆ ಧರ್ಮಸ್ಥಳದ ವತಿಯಿಂದ ಸಹಕಾರ ನೀಡಲಾಗುವುದು ಎಂದ ಡಾ| ಹೆಗ್ಗಡೆ ದೇಗುಲ ನಗರಿ ಸ್ವತ್ಛ ಇಲ್ಲದಿದ್ದರೆ ಭಕ್ತಿ ಮೂಡುವುದಿಲ್ಲ. ದೇಗುಲ ನಗರಿಯಲ್ಲಿ ಅಶುಚಿ ಮಾಡುವುದು ಕೂಡ ಪಾಪದ ಕೆಲಸ ಎಂದರು.ಹೊಸದಾಗಿ ಬೃಹತ್ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು. ಈಗ ಕನಿಷ್ಠ 6 ತಾಸು ದೇವರ ದರ್ಶನಕ್ಕಾಗಿ ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಹಾಗಾಗಿ ಸರದಿಯಲ್ಲಿರುವವರ ಶೌಚ, ವಿಶ್ರಾಂತಿ, ಆಹಾರದ ಕುರಿತು ಇದರಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಕ್ಯೂನಲ್ಲಿ ಆಹಾರ ನೀಡುವ ಕ್ರಮ ಆರಂಭಿಸಲಾಗಿದೆ. ಧರ್ಮಸ್ಥಳ ನಗರಾಭಿವೃದ್ಧಿಗೂ ಕ್ರಮ ವಹಿಸಲಾಗುವುದು. ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು ಎಂದರು.
ಇಂಡಿಯಾ ಟುಡೆ ಪತ್ರಿಕೆ ವತಿಯಿಂದ ರಾಷ್ಟ್ರದಲ್ಲಿಯೇ ಸ್ವತ್ಛ ಧಾರ್ಮಿಕ ನಗರಿ ಸಫಾಯಿಗಿರಿ ಪ್ರಶಸ್ತಿಗೆ ಪಾತ್ರವಾದ ಧರ್ಮಸ್ಥಳವನ್ನು ಅಭಿನಂದಿಸಲಾಯಿತು. ಧರ್ಮಸ್ಥಳದ ವತಿಯಿಂದ ಗ್ರಾ.ಪಂ.ಗೆ ಅಭಿನಂದನೆ ಸಲ್ಲಿಸಲಾಯಿತು.
ಕ್ಷೇತ್ರದ ನೌಕರರಾದ ಓಬಯ್ಯ ಗೌಡ ಹಾಗೂ ಕಮಲ ಪೂಜಾರ್ತಿಯನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಹಂತೇಶ್ ಕೌಜಲಗಿ ಮs…, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹಷೇìಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್, ಉಪಾಧ್ಯಕ್ಷೆ ಜಯಂತಿ ಉಪಸ್ಥಿತರಿದ್ದರು.
ಶ್ರೇಯಸ್ ಕುಮಾರ್ ಬಹುಮಾನ ವಿತರಿಸಿದರು. ಬಂಗಾಡಿ ಅರಸರಾದ ರವಿರಾಜ ಬಲ್ಲಾಳರು ಬರೆದ ಧರ್ಮಸ್ಥಳದ ಇತಿಹಾಸ ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಸ್ವಾಗತಿಸಿ, ಉಪನ್ಯಾಸಕ ಡಾ| ಶ್ರೀಧರ ಭಟ್ ನಿರ್ವಹಿಸಿ, ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ವಂದಿಸಿದರು.
Click this button or press Ctrl+G to toggle between Kannada and English