ಮುಜರಾಯಿ ಇಲಾಖೆಯ ಕಾಯಕಲ್ಪಕ್ಕೆ ಆಧ್ಯತೆ: ಸಚಿವ ಲಮಾಣಿ

9:39 AM, Friday, October 28th, 2016
Share
1 Star2 Stars3 Stars4 Stars5 Stars
(No Ratings Yet)
Loading...

Mujarayi Ilakhe ಸುಬ್ರಹ್ಮಣ್ಯ: ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಡಿಯಲ್ಲಿ 60ಕ್ಕೂ ಮಿಕ್ಕಿ ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿಯು ರಚನೆಯಾಗಿದೆ. ಮುಜರಾಯಿ ಇಲಾಖೆ ತುಂಬಾ ಮುಜುಗರ ಇರುವ ಇಲಾಖೆಯಾಗಿದೆ. ಹೆಚ್ಚಿನ ದೇವಸ್ಥಾನಗಳಲ್ಲಿ ಸಿಬ್ಬಂಧಿ ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆಯಿದೆ. ನಾನು ಈ ಖಾತೆಯ ಜವಾಬ್ದಾರಿ ಸ್ವೀಕರಿಸಿದ ಬಳಿಕ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಕಾಯಕಲ್ಪ ನೀಡಲು ಆಧ್ಯತೆ ನೀಡುತ್ತೇನೆ ಎಂದು ಜವುಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.

ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸುಬ್ರಹ್ಮಣ್ಯದ ಸಮಗ್ರ ಅಭಿವೃದ್ಧಿಯ 180 ಕೋಟಿ ರೂ ವೆಚ್ಚದ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಈಗಾಗಲೇ ಮೊದಲ ಹಂತ ಮುಗಿದಿದೆ. ಅತ್ಯವಶ್ಯಕವಾದ ಎರಡನೇ ಹಂತದ ಯೋಜನೆಯ ಒಳಚರಂಡಿ ಮತ್ತು ನೀರು ಸರಬರಾಜಿನ ಕಾಮಗಾರಿ ಮುಗಿದಿದ್ದು ಇದನ್ನು ಉಪಯೋಗಿಸಲು ಅವಶ್ಯಕವಾದ ಪೈಪ್ ಲೈನ್ ಸಂಪರ್ಕ ಮಾಡಲು ರಸ್ತೆ ಅಗಲೀಕರಣವಾಗದೆ ಕಾಮಗಾರಿ ಕುಂಠಿತಗೊಂಡಿದ್ದು ಈ ಕಾರ್ಯವನ್ನು ನೆರವೇರಿಸಲು ಕ್ಯಾಬಿನೆಟ್‌ನಲ್ಲಿ ಆಡಳಿತಾತ್ಮಕ ಮಂಜುರಾತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಕುಮಾರಧಾರದಿಂದ ರಥಬೀದಿ ತನಕ ಚತುತ್ಪಥ ರಸ್ತೆ ನಿರ್ಮಾಣಕ್ಕೆ ಖಾಸಾಗಿಯವರು ಕೋರ್ಟ್ ಮೆಟ್ಟಲೇರಿರುವುದರಿಂದ ಕಾನೂನು ಚೌಕಟ್ಟಿನಲ್ಲಿ ಮಾತಕತೆಯ ಮೂಲಕ ಪರಿಹಾರ ನೀಡಿ ಕಾಮಗಾರಿ ನಡೆಸಲಾಗುವುದು ಎಂದರು.

ರಾಜ್ಯದ ಶ್ರೀಮಂತ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೂರಾರು ಕೋಟಿಯ ಮಾಸ್ಟರ್‌ಪ್ಲಾನ್ ಯೋಜನೆ ನಡೆಯುತ್ತಿದ್ದು, ದೇವಳದಲ್ಲಿ ಸರಿಯಾದ ಇಂಜಿನಿಯರಿಂಗ್ ವಿಭಾಗ ಇಲ್ಲದೆ ಇರುವುದರಿಂದ ಲೋಕೋಪಯೋಗಿ ಇಲಾಖೆಯನ್ನು ಅವಲಂಭಿಸಬೇಕಾಗಿದೆ. ಆದುದರಿಂದ ಕುಕ್ಕೆ ದೇವಳಕ್ಕೆ ನೂತನ ಇಂಜಿನಿಯರಿಂಗ್ ವಿಭಾಗ ತೆರೆಯಲಾಗುವುದು.

ರಾಜ್ಯದ ದೇವಳಗಳಲ್ಲಿ ಸುಮಾರು 10ವರ್ಷಗಳಿಂದ ದಿನಕೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭಕ್ತಾಧಿಗಳ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಲು ನ.3ರಂದು ವೀಡಿಯೋ ಕಾನ್ಪರೆನ್ಸ್ ನಡೆಸಲಾಗುವುದು. ಅಲ್ಲದೆ ನೇರ ಪೋನ್ ಇನ್ ಕಾರ್ಯಕ್ರಮದ ಮೂಲಕ ಭಕ್ತಾಧಿಗಳ ಕುಂದು ಕೊರತೆ ಸ್ವೀಕರಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

Mujarayi Ilakhe ಸ್ಥಳೀಯ ಪಂಚಾಯತ್ ಸೂಕ್ತ ಸ್ಥಳ ನೀಡಿದಲ್ಲಿ ಸುಸಜ್ಜಿತವಾದ ರುದ್ರಭೂಮಿಯನ್ನು ಕುಕ್ಕೆಯಲ್ಲಿ ನಿರ್ಮಿಸಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಪದವಿ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ವಿಜ್ಞಾನ ವಿಭಾಗ ಹಾಗೂ ವಾಣಿಜ್ಯಶಾಸ್ತ್ರದ ಸ್ನಾತಕೋತ್ತರ ಪದವಿ ತೆರೆಯಲು ಪ್ರಯತ್ನಿಸಲಾಗುವುದು. ಮಠ ಮಂದಿರಗಳನ್ನು ಖಾಸಗೀಕರಣಗೊಳಿಸುವ ಅಥವಾ ಸರಕಾರ ವಶಪಡಿಸಿಕೊಳ್ಳುವ ಯಾವುದೇ ಚಿಂತನೆ ನಡೆಸಿಲ್ಲ, ನಡೆಸುವುದೂ ಇಲ್ಲ ಎಂದರು.

ನೆರೆಯ ಕೆಲ ರಾಜ್ಯಗಳಲ್ಲಿ ಜಾರಿಯಲ್ಲಿ ಇರುವಂತೆ ರಾಜ್ಯದ ಮುಜರಾಯಿ ಇಲಾಖೆಯ ಕೆಲ ಹಿಂದೂ ದೇವಸ್ಥಾನಗಳಲ್ಲಿ ವಸ್ತ್ರನೀತಿ ಸಂಹಿತೆ ಜಾರಿ ಕುರಿತಂತೆ ಸರಕಾರ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯ ಹೊರಾಂಗಣದ ಸುತ್ತು ಪೌಳಿಯ ಮೇಲ್ಛಾವಣಿ ದುರಸ್ತಿ ಕಾರ್ಯ ಶೀಘ್ರ ಆಗಲಿದೆ. ದುರಸ್ತಿಗೆ ಸಂಬಂಧಿಸಿ ಕಾಮಗಾರಿ ಪ್ರಗತಿ ಹಂತದಲ್ಲಿದ್ದು ಸುಸಜ್ಜಿತವಾಗಿ ಮೇಲ್ಛಾವಣಿ ನಿರ್ಮಾಣವಾಗಲಿದೆ. ಈ ಮೂಲಕ ಬಹು ಕಾಲದ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಲಿದೆ ಎಂದರು.

ಕ್ಷೇತ್ರಕ್ಕೆ ಮಂಗಳವಾರ ಕುಟುಂಬ ಸಮೇತರಾಗಿ ಆಗಮಿಸಿದ ಸಚಿವರು ಆರಂಭದಲ್ಲಿ ಶ್ರೀ ದೇವರ ದರುಶನ ಮಾಡಿದರು. ಬಳಿಕ ಶ್ರೀ ಸಂಪುಟ ನರಸಿಂಹ ಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿಗಳ ಆಶಿರ್ವಾದ ಪಡೆದರು. ಯತಿಗಳು ಸಚಿವರಿಗೆ ಫಲಪುಷ್ಪ ಮಂತ್ರಾಕ್ಷತೆ ನೀಡಿ ಗೌರವಿಸಿದರು. ಬಳಿಕ ಮುಜರಾಯಿ ಇಲಾಖೆಯಿಂದ ನಡೆಸಲ್ಪಡುವ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದರು.

ಸಚಿವರ ಜತೆ ಪತ್ನಿ ಮಂಜುಳಾ, ಮಕ್ಕಳು ಹಾಗೂ ಸಹೋದರರು ಆಗಮಿಸಿದ್ದರು. ಭೇಟಿ ಸಂದರ್ಭ ಕುಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯರುಗಳಾದ ಮಹೇಶ್ ಕುಮಾರ್ ಕೆ.ಎಸ್, ರಾಜೀವಿ ಆರ್ ರೈ, ರವೀಂದ್ರನಾಥ ಶೆಟ್ಟಿ, ಬಾಲಕೃಷ್ಣ ಗೌಡ ಬಳ್ಳೇರಿ, ಕೆ.ಕೃಷ್ಣಮೂರ್ತಿ ಭಟ್, ದಮಯಂತಿ ಕೂಜುಗೋಡು, ಮಾಧವ.ಡಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್, ಜಗನ್ನಿವಾಸ ರಾವ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾರಂಗಯ್ಯ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English