ಮಂಗಳೂರು: ಕದ್ರಿ ದೇವಸ್ಥಾನದಲ್ಲಿ ಭಾವೈಕ್ಯತಾ ದೀಪಾವಳಿ ನಡೆಸುವ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ. ಆದರೆ, ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಆರೋಪ ಮಾಡಿರುವುದರಿಂದ ಅನಿವಾರ್ಯವಾಗಿ ಕಾರ್ಯಕ್ರಮವನ್ನು ಅಕ್ಟೋಬರ್ 29ರಂದು ಕದ್ರಿಯ ಗೋರಕ್ಷನಾಥ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾರ್ಯಕ್ರಮದಂಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಗೂಡುದೀಪ ಸ್ಪರ್ಧೆ , ಭಾಷಣ ಸ್ಪರ್ಧೆಗಳನ್ನು ನಡೆಸಲಾಗಿದೆ. ಇದೀಗ ಏಕಾಏಕಿ ಕಾರ್ಯಕ್ರಮ ರದ್ದು ಮಾಡಿದರೆ ಮನಸ್ಸಿಗೆ ನೋವಾಗುತ್ತದೆ ಎಂಬ ಕಾರಣಕ್ಕೆ ಸ್ಥಳಾಂತರಿಸಲಾಗಿದೆ ಎಂದರು.
ದೀಪಾವಳಿ ಭಾವೈಕ್ಯತಾ ಕಾರ್ಯಕ್ರಮ ನನ್ನೊಬ್ಬನ ನಿರ್ಧಾರವಲ್ಲ. ಇದಕ್ಕಾಗಿ ವಿವಿಧ ಧರ್ಮಗಳ ಪ್ರತಿನಿಧಿಗಳಿರುವ 50 ಮಂದಿಯ ಸಮಿತಿ ರಚಿಸಲಾಗಿತ್ತು. ಅದರಲ್ಲಿ ಶೇ.80ರಷ್ಟು ಹಿಂದೂಗಳೇ ಇದ್ದಾರೆ. ಕಾರ್ಯಕ್ರಮವನ್ನು ಕದ್ರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲು ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿ ಕೂಡಾ ಪಡೆದಿದ್ದವು. ಹೀಗಿರುವಾಗ ಇದು ಹೇಗೆ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ತಾನು ದೇವಸ್ಥಾನದಲ್ಲಿ ನಡೆಯುವ ಹೊರೆಕಾಣಿಕೆಗೆ ಕೊಡುಗೆ ನೀಡುತ್ತಾ ಬಂದಿದ್ದೇನೆ. ಎಲ್ಲಾ ಧರ್ಮದವರು ಕರೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಹಾಗಿರುವಾಗ ತನ್ನಲ್ಲಿ ಧರ್ಮ ಸಹಿಷ್ಣುತೆಯಿಲ್ಲ ಎಂದು ಆರೋಪ ಮಾಡುವವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಕೇಳಿದ್ದಾರೆ.
Click this button or press Ctrl+G to toggle between Kannada and English