ಮಂಗಳೂರು: ಮನೆ, ಕಟ್ಟಡ ನಿರ್ಮಾಣಗಳಿಗೆ ಬೇಕಾಗುವ ಮರಳು ಇನ್ನು ಮುಂದೆ ಸಾಗರ ಭೂಗರ್ಭದ ಒಳಗಿನಿಂದ ಸರಬರಾಜು ಆಗಲಿದೆ.
ಸಮುದ್ರ ತೀರದಿಂದ 10 ಕಿ.ಮೀ. ವ್ಯಾಪ್ತಿಯ ಹೊರಗೆ (ಸಮುದ್ರದೊಳಗೆ) ಕೇರಳ ವ್ಯಾಪ್ತಿಯ 2,797 ಚ.ಕಿ.ಮೀ. ಪ್ರದೇಶದಲ್ಲಿ ನಿರ್ಮಾಣ ಯೋಗ್ಯ ಮರಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿಯ 4,525 ಚ.ಕಿ.ಮೀ. ಭೂಗರ್ಭ ಪ್ರದೇಶದಲ್ಲಿ ನಿರ್ಮಾಣ ಯೋಗ್ಯ ಮತ್ತು ಕಾರ್ಬೊನೇಟ್ ಮರಳು ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭೂ ಸರ್ವೇಕ್ಷಣಾ ಇಲಾಖೆಯ ಡೈರೆಕ್ಟರ್ ಜನರಲ್ ಎಂ.ರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಗರ ಭೂಗರ್ಭದೊಳಗಿರುವ ಲವಣಗಳ (ಮರಳು ಸೇರಿದಂತೆ) ಬಳಕೆಯ ಕುರಿತು ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಈ ಕುರಿತು ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀತಿ ನಿರೂಪಣೆಯ ಹಂತದಲ್ಲಿದೆ. ಆದರೆ ಸದ್ಯಕ್ಕೆ ಭೂ ಸರ್ವೇಕ್ಷಣಾ ಇಲಾಖೆಗೆ ಸೇರಿದ ಯಂತ್ರಗಳು ಸಾಗರ ಮಟ್ಟದಿಂದ ಕೇವಲ 3 ಮೀ. ಆಳವನ್ನಷ್ಟೇ ಕೊರೆಯುವ ಸಾಮರ್ಥ್ಯ ಹೊಂದಿವೆ. ಇದರಿಂದ ಭೂಮಿಯಡಿಯ ನಿಕ್ಷೇಪಗಳ ಸಮಗ್ರ ಮಾಹಿತಿ ದೊರೆಯುವುದಿಲ್ಲ. ಅದಕ್ಕಾಗಿ ಹೊಸ ತಂತ್ರಜ್ಞಾನದ ಮೂಲಕ ಕೊರೆಯುವ ಹಡಗು ಸಹಿತ ಯಂತ್ರವನ್ನು ಬಳಕೆ ಮಾಡಲು ಉದ್ದೇಶಿಸಲಾಗಿದೆ.
ಹೊಸ ಯಂತ್ರ 30 ಮೀ. ಆಳದವರೆಗೂ ಕೊರೆಯುವ ಸಾಮರ್ಥ್ಯ ಹೊಂದಿರುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಜಾಗತಿಕ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ನಂತರ ಲವಣ ನಿಕ್ಷೇಪಗಳ ನಿಖರ ಹಾಗೂ ಸಮಗ್ರ ಮಾಹಿತಿ ಪಡೆಯಲು ಸಾಧ್ಯವೆಂದು ಅವರು ವಿವರಿಸಿದರು.
Click this button or press Ctrl+G to toggle between Kannada and English