ಮಂಗಳೂರು: ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಪೂರ್ಣ ರಸ್ತೆ ಬಂದ್ ಮಾಡಲಾಗಿದೆ. ಅಲ್ಲದೆ, ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿರಾಡಿ ಅಭಿವೃದ್ಧಿ ಕಾಮಗಾರಿಗಾಗಿ ಸಂಪೂರ್ಣ ರಸ್ತೆ ಬಂದ್ ಮಾಡುವುದಕ್ಕೆ ಪ್ರಬಲವಾಗಿ ವಿರೋಧಿಸಿದ ಸಚಿವ ರೈ, ಸಂಪೂರ್ಣವಾಗಿ ರಸ್ತೆ ಬಂದ್ ಮಾಡಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಇದರ ಜೊತೆಗೆ ಪರ್ಯಾಯ ಮಾರ್ಗವಾದ ಚಾರ್ಮಾಡಿ ಘಾಟಿನಲ್ಲಿಯೂ ಕೂಡ ವಾಹನಗಳ ದಟ್ಟಣೆ ಹೆಚ್ಚಾಗಲಿದೆ ಎಂದರು.
ಅದಕ್ಕಾಗಿ ಶಿರಾಡಿಯಲ್ಲಿ ಕೆಲವೊಂದು ಕಿರಿದಾದ ತಿರುವು ಹಾಗೂ ಅಗತ್ಯ ಸ್ಥಳಗಳಲ್ಲಿ ಅಗಲೀಕರಣ ಮಾಡಿಕೊಂಡು ಲಘು ವಾಹನಗಳಿಗೆ ಓಡಾಡಲು ಅವಕಾಶ ನೀಡಬೇಕು. ತೀರಾ ಅಗತ್ಯವಿರುವ ಪ್ರದೇಶಗಳ ಕಾಮಗಾರಿಯ ವೇಳೆ ಒಂದು ವಾರದಿಂದ 15 ದಿನಗಳ ಅವಧಿಗೆ ಬಂದ್ ಮಾಡಿ ಕಾಮಗಾರಿ ಮುಗಿಸಿ ಮತ್ತೆ ಲಘು ವಾಹನಗಳಿಗೆ ಓಡಾಟಕ್ಕೆ ಅವಕಾಶ ನೀಡಿದ್ದಲ್ಲಿ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಇಂಜಿನಿಯರ್ ಲಕ್ಷ್ಮಣ ರಾವ್ ಪೇಶ್ವೆ ಅವರ ಜತೆ ದ.ಕ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.
Click this button or press Ctrl+G to toggle between Kannada and English