ಮಂಗಳೂರು: ನಲ್ವತ್ತರ ಸಂಭ್ರಮದಲ್ಲಿರುವ ಕಾಂತಾವರದ ಕನ್ನಡ ಸಂಘದ ವತಿಯಿಂದ ಆರಂಭಗೊಂಡ ಎರಡು ದಿನಗಳ ಕಾಂತಾವರ ಉತ್ಸವ-2016ರ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರಿಗೆ ‘ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ನಲವತ್ತು ವರುಷಗಳ ನುಡಿಹೆಜ್ಜೆ ನಡೆಗೆಜ್ಜೆಗಳನ್ನು ದಾಖಲಿಸಿದ ಮಹಾಸಂಪುಟ ‘ಸಂಘ ಜಂಗಮ’ವನ್ನು ಚಲನ ಚಿತ್ರ ನಿರ್ದೇಶಕ ಡಾ. ಗಿರೀಶ ಕಾಸರವಳ್ಳಿ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಜಾಗತೀಕರಣ ಎನ್ನುವುದು ವ್ಯವಹಾರಿಕವಾಗಿ ಲಾಭದಾಯಕ ಎನಿಸಬಹುದು. ಆದರೆ ಸಾಂಸ್ಕೃತಿಕ ಮನಸ್ಸುಗಳಿಗೆ ತಮ್ಮ ನೆಲದ ಮೂಲ ಬೇರುಗಳ ಅಸ್ವಿತ್ವ ಗಟ್ಟಿಯಾಗದೆ ಪ್ರಗತಿ ಸಾಧ್ಯವಿಲ್ಲ ಎನ್ನುವ ಆತಂಕ ಇದ್ದೇ ಇರುತ್ತದೆ.
ವಾಸ್ತವ ಮರೆಯದೆ ಹೊರಗಿನ ಆಕರ್ಷಣೆಗಳನ್ನು ನಿರಾಕರಿಸದೆ ಗ್ಲೋಬಲ್ ಮತ್ತು ಲೋಕಲ್‌ಗಳ ಸಮ್ಮಿಶ್ರಣವಾಗಿರುವ ಗ್ಲೋಕಲ್ ಎಂಬಂತಿರುವ ಹೊಸ ಮಾದರಿಯನ್ನು ಮೊಗಸಾಲೆಯವರು ಕಾಂತಾವರ ಕನ್ನಡ ಸಂಘದ ಮೂಲಕ ನಾಡಿಗೆ ನೀಡಿದ್ದಾರೆ ಎಂದು ಹೇಳಿದರು.
ನಿಟ್ಟೆ ವಿವಿಯ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಡಾ.ನಾ. ಮೊಗಸಾಲೆ, ಕಾರ್ಯದರ್ಶಿ ಸದಾನಂದ ನಾರಾವಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English