ಉಪ್ಪಳ: ನಿವೇಶನದ ನಕ್ಷೆ ನೀಡಲು ಗ್ರಾಹಕರೋರ್ವರಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮಾಧಿಕಾರಿಯನ್ನು ವಿಜಿಲೆಂನ್ಸ್ ಅಧಿಕೃತರು ಕೈಯಾರೆ ಸೆರೆಹಿಡಿದ ಘಟನೆ ಶನಿವಾರ ಬಾಯಾರು ಗ್ರಾಮಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದಿದ್ದು,ಸಂಚಲನಕ್ಕೆ ಕಾರಣವಾಗಿದೆ.
ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಗ್ರಾಮ ಬಾಯಾರು ಗ್ರಾಮಾಧಿಕಾರಿ ಆಲಪ್ಪುಳ ಮಾವೇಲಿಕ್ಕರ ನಿವಾಸಿ ಇ.ರವಿ ಎಂಬವರ ಪುತ್ರ ಸುಧಾಕರನ್(51)ಲಂಚ ಸ್ವೀಕರಿಸುತ್ತಿದ್ದಾಗ ವಿಜಿಲೆಂನ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಆರೋಪಿಯಾಗಿದ್ದಾನೆ.
ಸ್ಥಳೀಯ ರಬ್ಬರ್ ಸಹಿತ ವಿವಿಧ ಕೃಷಿಕರಾದ ವ್ಯಕ್ತಿಯೋರ್ವರು(ಹೆಸರು ಫಾತಿಮಾ ಖಾಲಿದ್)ತಮ್ಮ ನಿವೇಶನದ ನಕ್ಷೆ(ಐ ಸ್ಕೆಚ್)ಪಡೆಯಲು ಕಳೆದ ಕೆಲವು ತಿಂಗಳುಗಳಿಂದ ಪ್ರಯತ್ನಿಸುತ್ತಿದ್ದು,ಸುಧಾಕರನ್ ವಿವಿಧ ಕಾರಣಗಳನ್ನು ನೀಡಿ ಸಹಕರಿಸದೆ ಸತಾಯಿಸುತ್ತಿದ್ದನೆಂದು ದೂರು ದಾರರು ತಿಳಿಸಿದ್ದಾರೆ. ಇದರಿಂದ ಬೇಸತ್ತು ಎರಡು ದಿನಗಳ ಹಿಂದೆ ಗ್ರಾಮಾಧಿಕಾರಿಗೆ ಪೋನ್ ಮೂಲಕ ಕೊನೆಯ ಬಾರಿಗೆ ಮನವಿ ನೀಡಿದಾಗ ಸುಧಾಕರನ್ ಅಷ್ಟು ಅಗತ್ಯವಿದ್ದಲ್ಲಿ 2 ಸಾವಿರ ರೂ. ಬೇಡಿಕೆ ಮುಂದಿರಿಸಿದ್ದು, ಇದರಂತೆ ಗ್ರಾಹಕರು ವಿಜಿಲೆಂನ್ಸ್ ಅಧಿಕೃತರಿಗೆ ದೂರು ನೀಡಿದರು. ಶನಿವಾರ ಮಧ್ಯಾಹ್ನ ವೇಳೆ ಗ್ರಾಹಕರು ಸುಧಾಕರನ್ ಗೆ ಬೇಡಿಕೆಯಿಟ್ಟ ಲಂಚದ ಮೊತ್ತ ಹಸ್ತಾಂತರಿಸುತ್ತಿದ್ದಾಗ ವಿಜಿಲೆಂನ್ಸ್ ಭ್ರಷ್ಟಾಚಾರ ನಿಗ್ರಹ ದಳ ಏಕಾಏಕಿ ಧಾಳಿ ನಡೆಸಿ ಕೈಯಾರೆ ಸೆರೆಹಿಡಿದರು.
ತಂಡದಲ್ಲಿ ವಿಜಿಲೆಂನ್ಸ್ ಡಿವೈಎಸ್‌ಪಿ ದಾಮೋದರನ್,ಸಿ.ಐ.ಅನಿಲ್ ಕುಮಾರ್,ಬಾಲಕೃಷ್ಣ ನಾಯರ್, ಅಧಿಕಾರಿಗಳಾದ ಕೆ.ವಿ.ರಾಧಾಕೃಷ್ಣನ್, ವಿಜು ಕುಮಾರ್, ಎಸ್.ಐ.ಪಿಳ್ಳೈ, ವಿನೋದ್, ರಮೇಶ್ ಮೊದಲಾದವರು ಕಾರ್ಯಾಚರಣೆಗೆ ಸಹಕರಿಸಿದರು. ಬಂಧನಕ್ಕೊಳಗಾದ ಸುಧಾಕರನ್ ವಿರುದ್ದ ಪಾನಮತ್ತನಾಗಿ ಕಚೇರಿಗೆ ಆಗಮಿಸುತ್ತಿರುವ ಬಗೆಗೂ ದೂರುಗಳಿವೆಯೆಂದು ವಿಜಿಲೆಂನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತನ ಸಂಪೂರ್ಣ ವಿಚಾರಣೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ವಿಜಿಲೆಂನ್ಸ್ ಅಧಿಕೃತರು ತಿಳಿಸಿದ್ದಾರೆ.
Click this button or press Ctrl+G to toggle between Kannada and English