ಮಂಗಳೂರು : ಎದೆಹಾಲು ಅತ್ಯುತ್ತಮ ಪೌಷ್ಠಿಕ ಆಹಾರವಾಗಿದ್ದು, ಮಗು ಹುಟ್ಟಿದ ತಕ್ಷಣ ಹಾಲುಣಿಸುವ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಬೇಕಾದ ಅಗತ್ಯವಿದೆ ಎಂದು ಯೆನಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುಲಾಮ್ ಜಿಲಾನಿ ಖಾದಿರಿ ಹೇಳಿದರು.
ಇಂದು ಯೆನಪೋಯಾ ಕಾಲೇಜಿನ ಅಕಾಡೆಮಿಕ್ ಬ್ಲಾಕ್ ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆಹಾರ ಮತ್ತು ಪೌಷ್ಠಿಕತಾ ಮಂಡಳಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮುದಾಯ ಆಹಾರ ಮತ್ತು ಪೌಷ್ಠಿಕ ವಿಸ್ತರಣಾ ಘಟಕ ಬೆಂಗಳೂರು ಮತ್ತು ಯೆನಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗ ಸಂಯುಕ್ತವಾಗಿ ಜಾಗತಿಕ ಸ್ತನ್ಯಪಾನ ಸಪ್ತಾಹ-2011 ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿ ನೀಡುವ ಪೌಷ್ಠಿಕ ಹಾಗೂ ರೋಗನಿರೋಧಕ ಶಕ್ತಿಯಿರುವ ಕೊಲೆಸ್ಟ್ರಮ್ ಬಗ್ಗೆ ತಾಯಿಯಂದಿರಲ್ಲಿ ಜಾಗೃತಿ ಮೂಡಿಸಬೇಕು. ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಸಮುದಾಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕೆಂದರು. ಎದೆ ಹಾಲುಣಿಸುವಿಕೆ ಮತ್ತು ಮಗುವನ್ನು ಹಿಡಿದುಕೊಳ್ಳುವ ರೀತಿಯ ಬಗ್ಗೆ ಅಮ್ಮಂದಿರಲ್ಲಿ ಅರಿವಿನ ಕೊರತೆ ಹಾಗೂ ಮೂಢನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ. ಇಂತಹ ಮೂಢನಂಬಿಕೆಗಳನ್ನು ಅಳಿಸಿ ಉತ್ತಮ ಅರಿವು ಹಾಗೂ ತಿಳುವಳಿಕೆ ನೀಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ನನ್ನೊಡನೆ ಮಾತಾಡು – ತಾಯಿ ಹಾಲುಣಿಸುವಿಕೆ – ಮೂರು ಆಯಾಮಗಳ ಅನುಭವ ಎಂಬುದು ಈ ಸಾಲಿನ ಘೋಷ ವಾಕ್ಯವಾಗಿದ್ದು ಎದೆ ಹಾಲುಣಿಸುವಿಕೆ ಬಗ್ಗೆ ಎಲ್ಲ ತಾಯಂದಿರಲ್ಲಿ ಜಾಗೃತಿ ಮೂಡಿಸಲು ಒಂದು ವಾರಗಳ ಕಾಲ ಜಿಲ್ಲೆಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶಕುಂತಳಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಒಟ್ಟಾಗಿ ಸ್ತ್ರೀಯರ ಬಗ್ಗೆ ಹೆಚ್ಚಿನ ಅಸ್ಥೆ ವಹಿಸುವುದರಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದರು. ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳಿವೆ ಎಂದರು. ಇಲಾಖೆ ಜಾರಿಗೆ ತಂದಿರುವ ಬಾಲಸಂಜೀವಿನಿ ಯೋಜನೆಯ ಪ್ರಯೋಜನವನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರಿನ ವಿದ್ಯಾಥರ್ಿಗಳು ಪಡೆದಿದ್ದು ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಇದು ಬಹಳಷ್ಟು ನೆರವಾಗಿದೆ ಎಂದರು.
ಯೆನಪೋಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಶ್ರೀ ಕೆ ಜನಾರ್ಧನ್ ಅವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಎಫ್ ಎನ್ ಬಿಯ ಎನ್ ಶ್ರೀನಿವಾಸ್ ಅವರು, ವಿಶ್ವದಲ್ಲಿ ವಾರ್ಷಿಕ ಸರಾಸರಿ 1.4 ಮಿಲಿಯನ್ ಮಕ್ಕಳು ಹುಟ್ಟಿದ ಒಂದು ತಿಂಗಳೊಳಗೆ ವಿವಿಧ ಕಾರಣಗಳಿಂದ ಸಾಯುತ್ತಾರೆ. ಮಕ್ಕಳಿಗೆ ಸರಿಯಾಗಿ ಅಮ್ಮಂದಿರು ಎದೆಹಾಲುಣಿಸಿದರೆ ಇವರಲ್ಲಿ ಶೇ. 22 ರಷ್ಟು ಮಕ್ಕಳ ಮರಣ ತಡೆಯುವುದು ಸಾಧ್ಯ ಎಂದರು. ಹುಟ್ಟಿದ 6 ತಿಂಗಳು ಮಗುವಿಗೆ ಹಾಲುಣಿಸುವುದರಿಂದ ಮಕ್ಕಳ ಸಾವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ ಎಂದರು. ಎದೆ ಹಾಲುಣಿಸುವಿಕೆಯಿಂದಾಗುವ ಅನುಕೂಲಗಳನ್ನು ವಿವರಿಸಿದರು. ಯೆನಪೋಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ ಪ್ರಕಾಶ್ ಸಲ್ಡಾನ ಅವರು ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಡಾಕ್ಟರ್ ಗಳಿಂದ ತಾಂತ್ರಿಕ ಗೋಷ್ಠಿ ನಡೆಯಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸಿಡಿಪಿಒಗಳು ಗೋಷ್ಠಿಗಳಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English