ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣದ ಖೈದಿ ಮುಸ್ತಾಫಾ ಜೈಲಿನಲ್ಲಿ ಕೊಲೆ

12:47 PM, Friday, November 11th, 2016
Share
1 Star2 Stars3 Stars4 Stars5 Stars
(No Ratings Yet)
Loading...

Mustafa-kavoor-ಮೂಡಬಿದಿರೆ: ಕಳೆದ ವರ್ಷ ಅಕ್ಟೋಬರ್‌ 9ರಂದು ಸಂಭವಿಸಿದ ಮೂಡಬಿದಿರೆಯ ಹೂವಿನ ವ್ಯಾಪಾರಿ ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾಧೀನ ಖೈದಿಯಾಗಿ ಮೈಸೂರು ಜೈಲಿನಲ್ಲಿದ್ದ ಮಂಗಳೂರು ಕಾವೂರು ಶಾಂತಿ ನಗರದ ಮುಸ್ತಾಫಾ (29) ನನ್ನು ಗುರುವಾರ ಜೈಲಿನಲ್ಲಿ ಕೊಲೆ ಮಾಡಲಾಗಿದೆ.

ಅದೇ ಜೈಲಿನಲ್ಲಿ ಖೈದಿಯಾಗಿದ್ದ ಮೂಡಬಿದಿರೆ ಸಮೀಪದ ಪಡುಮಾರ್ನಾಡು ಬನ್ನಡ್ಕದ ಬಾಂಬೆ ಕಿರಣ್‌ ಶೆಟ್ಟಿ ಗುರುವಾರ ಬೆಳಿಗ್ಗೆ ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಪ್ರಶಾಂತ್‌ ಕೊಲೆ ಆರೋಪಿಗಳ ಪೈಕಿ ಒಬ್ಬನಾದ ಮುಸ್ತಫಾ ಮೈಸೂರು ಜೈಲಿನಲ್ಲಿದ್ದ. ಕಿರಣ್‌ ಶೆಟ್ಟಿ ಕೂಡ ಅದೇ ಜೈಲಿನಲ್ಲಿ ಮತ್ತೂರ್ವ ಖೈದಿಯಾಗಿದ್ದ. ಕಿರಣ್‌ ಶೆಟ್ಟಿ 3 ವರ್ಷಗಳ ಹಿಂದೆ ವ್ಯಕ್ತಿಯೋರ್ವರ ಕಾಲು ಕಡಿದು ಮೂಡಬಿದಿರೆಯಿಂದ ಪರಾರಿಯಾಗಿದ್ದ. ಮೂಡುಬಿದಿರೆ ಪೊಲೀಸರು ಆತನನ್ನು ಮುಂಬಯಿನಲ್ಲಿ ಬಂಧಿಸಿ ಜೈಲಿಗೆ ತಳ್ಳಿದ್ದರು. ಮುಂಬಯಿನಲ್ಲಿದ್ದ ಕಾರಣ ಆತನಿಗೆ ಬಾಂಬೆ ಕಿರಣ್‌ ಶೆಟ್ಟಿ ಎಂಬ ಹೆಸರು ಆಂಟಿಕೊಂಡಿತ್ತು.

ಕಿರಣ್‌ ಶೆಟ್ಟಿ ಮತ್ತು ಕೊಲೆಯಾಗಿದ್ದ ಪ್ರಶಾಂತ್‌ ಪೂಜಾರಿ ಆತ್ಮೀಯರಾಗಿದ್ದರು. ಮೈಸೂರು ಜೈಲಿನಲ್ಲಿದ್ದಾಗ ತನ್ನ ದೋಸ್ತಿ ಪ್ರಶಾಂತ್‌ ಕೊಲೆಯಾದ ವಿಚಾರ ಪತ್ರಿಕೆಗಳ ಮೂಲಕ ಕಿರಣ್‌ಗೆ ತಿಳಿದಿತ್ತು ಎಂದು ಆತ ಇತ್ತೀಚೆಗೆ ಮೂಡಬಿದಿರೆ ಪೊಲೀಸರ ವಿಚಾರಣಾ ಸಂದರ್ಭದಲ್ಲಿ ಹೇಳಿದ್ದ. ಮೂರು ತಿಂಗಳ ಹಿಂದೆ ಮೂಡಬಿದಿರೆಯ ಸ್ವರಾಜ್ಯ ಮೈದಾನಿನಲ್ಲಿ ವ್ಯಕ್ತಿಯೋರ್ವರ ಕೊಲೆಗೆ ಸ್ಕೆಚ್‌ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿದ್ದರು. ಆ ಪ್ರಕರಣದಲ್ಲಿ ಕಿರಣ್‌ ಶೆಟ್ಟಿಯ ಪಾತ್ರವಿದೆ ಎಂಬ ಸಂಶಯದಿಂದ ಮೂಡಬಿದಿರೆ ಪೊಲೀಸರು ಆತನನ್ನು ವಿಚಾರಣೆಗಾಗಿ ಮೈಸೂರು ಜೈಲಿನಿಂದ ಕರೆ ತಂದಿದ್ದರು. ಆದರೆ ಈ ಕೊಲೆ ಸ್ಕೆಚ್‌ ಪ್ರಕರಣಕ್ಕೂ ಕಿರಣ್‌ಗೂ ಸಂಬಂಧವಿಲ್ಲ ಎಂದು ಬಳಿಕ ಗೊತ್ತಾಗಿತ್ತು. ಆದರೆ ಗೆಳೆಯ ಪ್ರಶಾಂತನನ್ನು ಯಾರು ಕೊಂದಿರಬಹುದು, ಆರೋಪಿಗಳು ಯಾರು ಎಂಬುದು ಕಿರಣ್‌ಗೆ ಗೊತ್ತಿರಲಿಲ್ಲ ಎನ್ನಲಾಗುತ್ತಿದೆ.

ಮುಸ್ತಫಾ ಕೊಲೆಯ ಹಿಂದೆ ಪ್ರಶಾಂತ್‌ ಪೂಜಾರಿ ಕೊಲೆಯ ಕುರಿತಾದ ಪ್ರತೀಕಾರವೋ ಅಥವಾ ಜೈಲಿನೊಳಗೆ ಉಂಟಾದ ಪುಟ್ಟ ಗಲಾಟೆಯ ಮುಂದುವರಿದ ಭಾಗವಾಗಿ ನಡೆದು ಹೋದ ಘಟನೆಯೋ ಎನ್ನುವುದು ತಿಳಿದು ಬಂದಿಲ್ಲ. ಆದರೆ ಕ್ಷುಲ್ಲಕ ಕಾರಣಕ್ಕೆ ಹತ್ಯೆ ನಡೆದಿದೆ.

ಮುಸ್ತಾಫಾನ ಮೇಲೆ 1 ಕೊಲೆ ಮತ್ತು 3 ಕೊಲೆಯತ್ನ ಸೇರಿದಂತೆ ಒಟ್ಟು 4 ಪ್ರಕರಣಗಳಿದ್ದು, ಆತನನ್ನು ಗೂಂಡಾ ಕಾಯಿದೆ ಹಾಕಿ ಮೈಸೂರು ಜೈಲಿಗೆ ಕಳುಹಿಸಲಾಗಿತ್ತು. ಈತನ ಮೇಲೆ ಮೂಡಬಿದಿರೆ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿವೆ. ಒಂದು ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣ ಆರೋಪವಾದರೆ, ಇನ್ನೊಂದು ಪೆರ್ಮುದೆ ಜಗದೀಶ್‌ ಕೋಟ್ಯಾನ್‌ ಕೊಲೆಯತ್ನ ಆರೋಪ. ಬಜಪೆ ಠಾಣಾ ವ್ಯಾಪ್ತಿಯ ಹಂಡೇಲುವಿನಲ್ಲಿ ನಡೆದ ಕೊಲೆ ಯತ್ನ ಹಾಗೂ ಕಾವೂರು ಠಾಣಾ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿ ರಿಕ್ಷಾ ಚಾಲಕನೊಬ್ಬನ ಕೊಲೆ ಯತ್ನ ಈತನ ಮೇಲಿದ್ದ ಇನ್ನೆರಡು ಪ್ರಕರಣಗಳು.

ಆರೋಪಿ ಕಿರಣ್‌ ಶೆಟ್ಟಿ ಈ ಹಿಂದೆ ಮುಂಬಯಿನ ಹೊಟೇಲೊಂದರಲ್ಲಿ ಉದ್ಯೋಗಿಯಾಗಿದ್ದ. ಆತನ ಮೇಲೆ ಅಕ್ರಮ ಆಯುಧ ಸಂಗ್ರಹ ಸೇರಿದಂತೆ ಹಲವು ಆರೋಪಗಳಿದ್ದು, ಈ ಕಾರಣಗಳಿಗಾಗಿಯೇ ಆತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಮೈಸೂರು ಜೈಲಿಗೆ ಕಳುಹಿಸಲಾಗಿತ್ತು. ಏಕಮುಖ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಈತನ ಮೇಲೆ ಕೊಲೆ ಯತ್ನ ಕೇಸು ದಾಖಲಾಗಿದ್ದು, ಈ ಪ್ರಕರಣದಲ್ಲಿ ಮೂಡಬಿದಿರೆ ಪೊಲೀಸರು ಆತನನ್ನು ಬಂಧಿಸಿದ್ದರು. ಮೈಸೂರು ವಿಶೇಷ ನ್ಯಾಯಾಲಯದಲ್ಲಿ ಈತನ ವಿಚಾರಣೆ ನಡೆಯುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English