ಟಿಪ್ಪು ಸುಲ್ತಾನ್‌ ಜನ್ಮದಿನ ಆಚರಣೆ ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮ ಆಗಿದೆ: ರಮಾನಾಥ ರೈ

3:41 PM, Friday, November 11th, 2016
Share
1 Star2 Stars3 Stars4 Stars5 Stars
(No Ratings Yet)
Loading...

Tippu Jayanthiಮಂಗಳೂರು: ಬ್ರಿಟಿಷರ ವಿರುದ್ಧ ಹೋರಾಡಿದ್ದ ವೀರ ಸೇನಾನಿ ಟಿಪ್ಪು ಸುಲ್ತಾನ್‌ ಅವರ ಜನ್ಮದಿನ ಆಚರಣೆ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮವೂ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ದೇಶದ ಇತಿಹಾಸವನ್ನು ಅವಲೋಕಿಸಿದಾಗ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಟಿಪ್ಪು ಸುಲ್ತಾನ್‌ ಮಹತ್ತರ ಸ್ಥಾನ ಗಳಿಸಿದ್ದಾರೆ. ಇತಿಹಾಸಕಾರರು ಟಿಪ್ಪುವನ್ನು ಮೈಸೂರಿನ ಹುಲಿ ಎಂದು ಬಣ್ಣಿಸಿದ್ದಾರೆ. ನಮ್ಮ ಹಿರಿಯರು ಸತ್ಯವಾದಿಗಳು, ಧರ್ಮವಂತರು. ಅವರು ಸತ್ಯವನ್ನು ಹೇಳುವ ಕಾರ್ಯ ಮಾಡಿದ್ದಾರೆ. ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಇತಿಹಾಸವನ್ನು ತಿರುಚುವ ಕಾರ್ಯ ನಡೆಯಿತು.

ಟಿಪ್ಪು ಸುಲ್ತಾನ್‌ ವಿರುದ್ಧ ಬ್ರಿಟಿಷರ ಜತೆ ಕೈಜೋಡಿಸಿದವರು ಬಹಳಷ್ಟು ಮಂದಿ ಇದ್ದರು. ಅಂತಹವರಿಗೆ ಟಿಪ್ಪುವಿನಿಂದ ತೊಂದರೆ ಆಗಿದೆ. ಇದನ್ನೇ ದೊಡ್ಡದು ಮಾಡುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಟಿಪ್ಪು ಸುಲ್ತಾನ್‌ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದವರು ಈಗ ವಿರೋಧಿಸುತ್ತಿದ್ದಾರೆ. ದ್ವೇಷ ಹರಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಬ್ರಿಟಿಷರ ವಿರುದ್ಧ ಹೋರಾಡಿದ ಇತಿಹಾಸ ಪುರುಷರನ್ನು ಗೌರವಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡುತ್ತಿದೆ. ಇದೊಂದು ಉತ್ತಮ ಕಾರ್ಯ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಮೊದಿನ್‌ ಬಾವಾ ಮಾತನಾಡಿ, ಟಿಪ್ಪು ಸುಲ್ತಾನ್‌ ಸರ್ವಧರ್ಮ ಪ್ರೇಮಿಯಾಗಿದ್ದ. ಇತಿಹಾಸ ಇದನ್ನು ಹೇಳುತ್ತದೆ. ಬ್ರಿಟಿಷರನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಮಾಡಿದ ವೀರ. ಆದರೆ ಕೊನೆಯ ಯುದ್ಧದ ಸಂದರ್ಭದಲ್ಲಿ ಕೆಲವು ಮಂದಿ ಬ್ರಿಟಿಷರ ಜತೆ ಕೈಜೋಡಿಸಿ ಒಳಸಂಚು ಮಾಡಿದ ಫಲವಾಗಿ ಟಿಪ್ಪು ಸೋಲು ಅನುಭವಿಸಬೇಕಾಯಿತು. ಒಂದು ವೇಳೆ ಸೋಲು ಅನುಭವಿಸದಿರುತ್ತಿದ್ದರೆ ಅಂದೇ ನಮಗೆ ಸ್ವಾತಂತ್ರÂ ಸಿಗುತ್ತಿತ್ತು ಎಂದರು.

ಮುಖ್ಯ ಉಪನ್ಯಾಸ ನೀಡಿದ ಮಂಗಳೂರು ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ| ಬಿ. ಶಿವರಾಮ ಶೆಟ್ಟಿ ಅವರು ಇತಿಹಾಸ ಪುರುಷರ ಜೀವನವನ್ನು ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸುವ ನೆಲೆಯಲ್ಲಿ ಮರುಕಥನ ಮಾಡಬೇಕು. ಟಿಪ್ಪು ಇತಿಹಾಸವನ್ನು ಕೂಡ ನಾವು ಆ ನೆಲೆಯಲ್ಲಿ ಪರಿಗಣಿಸಬೇಕು ಎಂದರು.

ಟಿಪ್ಪು ಸುಲ್ತಾನ್‌ ಬಗ್ಗೆ ಧಾರಾವಾಹಿಗಳು ಬಂದಿವೆ. ರಂಗ ಪ್ರಯೋಗಗಳಾಗಿವೆ. ಪಠ್ಯವಾಗಿ ಬಂದಿವೆ. ಯಾವತ್ತೂ ಇಂದು ಕಂಡುಬರುತ್ತಿರುವ ರೀತಿಯ ಕೋಲಾಹಲವಾಗಿಲ್ಲ. ಇಂದು ಈ ರೀತಿಯ ಬಿಗು ವಾತಾವರಣದ ನಡುವೆ ಈ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ವಿಷಾದವೂ ಇದೆ ಎಂದವರು ಹೇಳಿದರು.

Tippu Jayanthiಇತಿಹಾಸ ಪುರುಷರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರು ಮಾಡಿರುವ ಒಳ್ಳೆಯ ಕಾರ್ಯಗಳು ಸಮಾಜ, ಸಮುದಾಯದ ಒಳಿತಿಗಾಗಿ ವಿಸ್ತರಿಸುವ ಕಾರ್ಯ ಆಗಬೇಕು. ಪ್ರಜಾಪ್ರಭುತ್ವದಲ್ಲಿ ಚರಿತ್ರೆ ನೆನಪುಗಳು, ಮರುಕಥನಗಳು ಒಳ್ಳೆಯ ನೆಲೆಯಲ್ಲಿ ಇರಬೇಕು. ಸಮಾಜಕ್ಕೆ ಕೆಡುಕು ತರುವ, ವಿಘಟಿಸುವ, ಪ್ರಚೋದಿಸುವ ನೆಲೆಯಲ್ಲಿ ಇರಬಾರದು ಎಂದವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮಾತನಾಡಿ, ಇತಿಹಾಸ ಪುರುಷರು ಸಮಾಜಕ್ಕೆ ನೀಡಿರುವ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಆದರೆ ಕೆಲವರು ಟಿಪ್ಪು ಸುಲ್ತಾನ್‌ ಬಗ್ಗೆ ತಪ್ಪು ಕಲ್ಪನೆ ಹರಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಮೇಯರ್‌ ಹರಿನಾಥ್‌, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಎಸ್‌.ಎಂ. ರಶೀದ್‌, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ತುಳುಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಗೇರು ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌ ಅತಿಥಿಗಳಾಗಿದ್ದರು. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌, ಮಂಗಳೂರು ಪೊಲೀಸ್‌ ಆಯುಕ್ತ ಎಸ್‌. ಚಂದ್ರಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್‌ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಕುಮಾರ್‌ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ವಂದಿಸಿದರು. ಉಮೇಶ್‌ ಕೆ.ಆರ್‌. ನಿರೂಪಿಸಿದರು.

ಟಿಪ್ಪು ಜಯಂತಿ ಆಚರಣೆ ನಿಗದಿಯಾಗಿದ್ದ ಜಿ.ಪಂ. ಸಭಾಂಗಣ ಸುತ್ತಮುತ್ತ ಪೊಲೀಸರ ಸರ್ಪಗಾವಲು ಇತ್ತು. ಜಿ.ಪಂ.ಗೆ ಸಾಗುವ ರಸ್ತೆಯಲ್ಲಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಿ ಕಣ್ಗಾವಲು ಇರಿಸಲಾಗಿತ್ತು. ಕೇರಳ ಪೊಲೀಸರು, ಕೆಎಸ್‌ಆರ್‌ಪಿ ಸಹಿತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿ.ಪಂ.ಗೆ ಸಾಗುವ ಮುಖ್ಯ ರಸ್ತೆ ಹೊರತು ಪಡಿಸಿ ಇತರ ಕಡೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಜಿ.ಪಂ. ಮುಖ್ಯ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿ ಬಿಡಲಾಗುತ್ತಿತ್ತು.

ಬಳಿಕ ಸಭಾಂಗಣ ಪ್ರವೇಶ ದ್ವಾರದಲ್ಲಿ ಲೋಹ ಶೋಧಕ ಅಳವಡಿಸಿ ತಪಾಸಣೆ ನಡೆಸಲಾಗುತ್ತಿತ್ತು. ಜಿ.ಪಂ. ಆವರಣದಲ್ಲಿ ಶಕ್ತಿಶಾಲಿ ಡ್ರೋನ್‌ ಕೆಮರಾ ಕಣ್ಗಾವಲಿಗೆ ನಿಯೋಜಿಸಿದ್ದು ಇದು ಹಾರಾಟ ನಡೆಸಿ ಜಿ.ಪಂ. ಸುತ್ತಮುತ್ತ ಹಾಗೂ ಪ್ರದೇಶದ ಸುತ್ತಮತ್ತಲಿನ ದೃಶ್ಯಗಳನ್ನು ಚಿತ್ರೀಕರಿಸುತ್ತಿತ್ತು. ಸಮಾರಂಭದಲ್ಲಿ ಅಧಿಕಾರಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English