ಮಂಗಳೂರು: ಆಳ್ವಾಸ್ ಶಿಕ್ಷಣ ಸಂಸ್ಥೆ ಹಮ್ಮಿಕೊಳ್ಳುವ ನಾಡು-ನುಡಿಯ ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ದಿನಗಣನೆ ಆರಂಭವಾಗಿದೆ.
ಮೂಡಬಿದ್ರೆಯ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಇದೇ ತಿಂಗಳ 18, 19 ಮತ್ತು 20ರಂದು ನಡೆಯುವ ಸಮ್ಮೇಳನ ಕರ್ನಾಟಕ: ನಾಳೆಗಳ ನಿರ್ಮಾಣ ಎಂಬ ಪರಿಕಲ್ಪನೆಯಡಿಯಲ್ಲಿ ಆಯೋಜನೆಗೊಂಡಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಬಿ.ಎನ್. ಸುಮಿತ್ರಾ ಬಾಯಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕವಿ, ಸಾಹಿತಿ ಡಾ. ಜಯಂತ್ ಕಾಯ್ಕಿಣಿ ನೆರವೇರಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನದ ರೂವಾರಿ ಡಾ. ಎಂ. ಮೋಹನ್ ಆಳ್ವ, ಮೂರು ದಿನಗಳ ಕಾಲವಿವಿಧ ವೇದಿಕೆಗಳಲ್ಲಿ ಸಾಹಿತ್ಯಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 13 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಇದಲ್ಲದೆ, ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿದ್ಯಾರ್ಥಿಸಿರಿ, ರಾಜ್ಯಮಟ್ಟದ ಚಿತ್ರಕಲಾ ಶಿಬಿರ, ಆಳ್ವಾಸ್ ಚಿತ್ರಸಿರಿ, ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನಕ್ಕಾಗಿ ಆಳ್ವಾಸ್ ಛಾಯಾಚಿತ್ರ ಸಿರಿ, ನರ್ಸರಿ ಮತ್ತು ಕೃಷಿಕ ಪರಿಕರ ಪ್ರದರ್ಶನ ಹಾಗೂ ಮಾರಾಟದ ಆಳ್ವಾಸ್ ಕೃಷಿಸಿರಿ, ರಂಗಭೂಮಿಗೆ ಸಂಬಂಧಿಸಿದಂತೆ ರಂಗಸಿರಿ, ಯಕ್ಷಗಾನಕ್ಕಾಗಿ ಯಕ್ಷಸಿರಿ, ರಾಜ್ಯ ದೇಹದಾರ್ಢ್ಯ ಪಟುಗಳ ಆಳ್ವಾಸ್ ದೇಹದಾರ್ಢ್ಯ ಸಿರಿ, ಸದಭಿರುಚಿಯ ಕನ್ನಡ ಸಿನಿಮಾಗಳ ಪ್ರದರ್ಶನಕ್ಕಾಗಿ ಆಳ್ವಾಸ್ ಸಿನಿಸಿರಿ, ಕಿಶೋ-ಕಿಶೋರಿಯರ ಕುಸ್ತಿ ಪ್ರದರ್ಶನಕ್ಕಾಗಿ ಆಳ್ವಾಸ್ ಕುಸ್ತಿಸಿರಿ ಈ ವರ್ಷದ ವೈಶಿಷ್ಟ್ಯ. 30 ಜಿಲ್ಲೆಗಳಿಂದಲೂ ಒಂದು ಲಕ್ಷಕ್ಕೂ ಮಿಕ್ಕಿ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದರು.
Click this button or press Ctrl+G to toggle between Kannada and English