ಮಂಗಳೂರು: ವೃದ್ಧಿ ಸಿನಿ ಕ್ರಿಯೇಷನ್ಸ್ ಲಾಂಛನದಡಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನಿತಾ ವಿನಯ ನಾಯಕ್ ಅವರ ನಿರ್ಮಾಣದ ತುಳು ಚಿತ್ರ ‘ಪನೊಡಾ ಬೊಡ್ಚಾ..!’ ನಾಳೆ (ನ. 18 ರಂದು) ಕರಾವಳಿಯಾದ್ಯಂತ ತೆರೆ ಕಾಣಲಿದೆ.
ಮುತ್ತಪ್ಪ ರೈ ಅವರ ಸಹಕಾರದೊಂದಿಗೆ ಚಿತ್ರ ನಿರ್ಮಾಣವಾಗಿದ್ದು, ಅವರ ರಾಮಕುಂಜದ ಒಡ್ಯಮೆ ಎಸ್ಟೇಟ್ ಮತ್ತು ಬಂಟ್ವಾಳ, ಬಿ.ಸಿ. ರೋಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ. ಶುಕ್ರವಾರ ಮಂಗಳೂರಿನ ಮೂರು ಚಿತ್ರಮಂದಿರ, ಸುರತ್ಕಲ್, ಉಡುಪಿ, ಮಣಿಪಾಲ, ಕಾರ್ಕಳ, ಮೂಡಬಿದಿರೆ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ.
ಚಿತ್ರದಲ್ಲಿ ಐಟಂ ಸಾಂಗ್ ಸಹಿತ ಒಟ್ಟು ನಾಲ್ಕು ಹಾಡುಗಳಿವೆ. ಹೆಚ್ಕೆ ನಯನಾಡು ಮತ್ತು ಮಧು ಸುರತ್ಕಲ್ ಸಾಹಿತ್ಯ ಒದಗಿಸಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂಬ ನಂಬಿಕೆ ಇದೆ ಎಂದು ಚಿತ್ರದ ನಿರ್ಮಾಪಕ ವಿನಯ ನಾಯಕ್ ಪಚ್ಚಾಜೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಸರಾಂತ ಕ್ಯಾಮರಾಮ್ಯಾನ್ ಸಂತೋಷ್ ರೈ ಪಾತಾಜೆ ಅವರು ಪ್ರಥಮ ಬಾರಿಗೆ ತುಳು ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ. ಅತ್ಯುತ್ತಮ ರೆಡ್ಡ್ರ್ಯಾಗನ್ ಅಲೂರಾ ಝೂಮ್ ಕ್ಯಾಮರಾ ಜೊತೆಗೆ 3 ಕ್ಯಾಮರಾ ಬಳಸಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತಮ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ತುಳುನಾಡಿನ ಸಮಸ್ತ ಜನತೆ ಈ ವೀಕ್ಷಿಸಿ ಆಶೀರ್ವದಿಸಬೇಕು ಎಂದರು.
ಈ ಚಿತ್ರದಲ್ಲಿ 20 ನಾಟಕ ತಂಡಗಳ 207 ಕಲಾವಿದರು ಅಭಿನಯಿಸಿದ್ದಾರೆ. ನವೀನ್ ಡಿ. ಪಡೀಲ್ ಅವರು ಈ ಬಾರಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಧ್ವಜ್ ನಾಯಕ ಪಾತ್ರದಲಿದ್ದು, ಶಕುಂತಳಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಸುಂದರ ರೈ ಮಂದಾರ ಅವರ ಕಥೆ-ಚಿತ್ರಕಥೆ-ಸಂಭಾಷಣೆ ಈ ಚಿತ್ರಕ್ಕಿದೆ ಎಂದು ವಿನಯ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕ ಕಿಶೋರ್ ಡಿ ಶೆಟ್ಟಿ, ಖ್ಯಾತ ಕಲಾವಿದ ನವೀನ್ ಡಿ. ಪಡೀಲ್, ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಟಿ. ಶ್ರೀನಿವಾಸ್, ಕ್ಯಾಮರಾಮ್ಯಾನ್ ಸಂತೋಷ್ ರೈ ಪಾತಾಜೆ, ಸಂಭಾಷಣೆಗಾರ ಸುಂದರ ರೈ ಮಂದಾರ, ಮಧು ಸುರತ್ಕಲ್ ಉಪಸ್ಥಿತರಿದ್ದರು.
ಚಿತ್ರ ಮಂದಿರದಲ್ಲಿ ಟಿಕೆಟ್ ಪಡೆಯಲು 500 ಮತ್ತು 1000 ಸಾವಿರ ನೋಟುಗಳನ್ನು ಸ್ವೀಕರಿಸಲಾಗುವುದು. ನೋಟು ಬದಲಾವಣೆಯಿಂದ ಚಿತ್ರ ಪ್ರೇಮಿಗಳಿಗೆ ಸಮಸ್ಯೆ ಎದುರಾಗಬಾರದು ಎಂಬ ನೆಲೆಯಲ್ಲಿ ಈ ನೋಟುಗಳನ್ನು ಸ್ವೀಕರಿಸಲು ನಿರ್ಧರಿಸಲಾಗುತ್ತಿದೆ ಎಂದು ನಿರ್ಮಾಪಕ ವಿನಯ ನಾಯಕ್ ಇದೇ ವೇಳೆ ತಿಳಿಸಿದರು.
Click this button or press Ctrl+G to toggle between Kannada and English