ಮಂಗಳೂರು: ಎತ್ತಿನಹೊಳೆ ಯೋಜನೆ ಜಾರಿಯಿಂದ ಪಶ್ಚಿಮ ಘಟ್ಟಕ್ಕೆ ಅಪಾರ ಹಾನಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ನಿರ್ಧರಿಸಲು ವಿಸ್ತೃತ ಅಧ್ಯಯನ ನಡೆಸಬೇಕೆಂದು ದೆಹಲಿಯ ಹಸಿರು ಪೀಠ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ನ.11ರಂದು ಹಸಿರು ಪೀಠದಲ್ಲಿ ಎತ್ತಿನಹೊಳೆ ಯೋಜನೆ ವಿಚಾರಣೆ ಕುರಿತಂತೆ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ದೂರಿನ ವಿಚಾರಣೆ ನಡೆಸಿ ಈ ನಿರ್ದೇಶನವನ್ನು ನೀಡಿದೆ ಎಂದು ಸಮಿತಿಯ ಸಂಚಾಲಕ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ನಿನ್ನೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮಿತಿ ಸದಸ್ಯ ಪುರುಷೋತ್ತಮ ಚಿತ್ರಾಪುರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹಸಿರು ಪೀಠದ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಪೀಠ, ಈ ಬಗ್ಗೆ ಗಹನವಾದ ಅಧ್ಯಯನ ನಡೆಸಿ ಮುಂದಿನ ವಿಚಾರಣೆಯಲ್ಲಿ ಮಾಹಿತಿ ಮಂಡಿಸುವಂತೆ ಸೂಚಿಸಿತು. ಅಲ್ಲದೆ ಮುಂದಿನ ವಿಚಾರಣೆಯನ್ನು ಡಿ.2ಕ್ಕೆ ನಿಗದಿಪಡಿಸಿದೆ ಎಂದರು.
ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಎಂ.ಸಿ. ಮೆಹೆತಾ ವಾದ ಮಂಡಿಸಿ, ನೇತ್ರಾವತಿ ಮತ್ತು ಎತ್ತಿನಹೊಳೆ ಯೋಜನೆಗಳು ಕುಡಿಯುವ ನೀರಿನ ನೆಪದಲ್ಲಿ ನದಿ ನೀರನ್ನು ಪೂರ್ವಕ್ಕೆ ತಿರುಗಿಸಿ ನದಿ ಪಾತ್ರವನ್ನು ಹಾಳುಗೆಡಹುವ ದಿಕ್ಕಿನಲ್ಲಿ ಕಾಮಗಾರಿ ಮುಂದುವರಿದಿದೆ. ಇದರಿಂದ ಪರಿಸರ ಹಾಗೂ ಪಶ್ಚಿಮ ಘಟ್ಟಗಳಿಗೆ ಅಪಾರ ಹಾನಿಯಾಗುತ್ತದೆ ಅಲ್ಲದೆ, ನೇತ್ರಾವತಿ ನದಿ ಸಂಪೂರ್ಣ ಬರಡಾಗುವ ಅಪಾಯವಿದೆ ಎಂದು ಯೋಜನೆಯ ಅಡತಡೆ ಮತ್ತು ಕಾಯ್ದೆಯ ವಿವರ ನೀಡಿದರು.
Click this button or press Ctrl+G to toggle between Kannada and English