ಆಳ್ವಾಸ್ ನುಡಿಸಿರಿಯಲ್ಲಿ ‘ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’

12:16 PM, Saturday, November 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

neighbouring languages ಮೂಡುಬಿದಿರೆ: ಜಾಗತಿಕ ಭಾಷೆಗಳು ನಮ್ಮನ್ನು ಆಳುತ್ತಿರುವ, ಆಕ್ರಮಿಸುತ್ತಿರುವ ಹೊತ್ತಿನಲ್ಲಿ ನಮ್ಮ ಸೋದರ ಭಾಷೆಗಳಲ್ಲಿ ಏನಾಗುತ್ತಿದೆಯೆಂಬುದನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ ‘ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’ ಎಂಬ ವಿಶೇಷ ವಿಚಾರ ಗೋಷ್ಠಿಯನ್ನು ನಡೆಸಲಾಯಿತು. ಈ ವಿಚಾರಗೋಷ್ಠಿಯಲ್ಲಿ ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ನಡೆಯುತ್ತಿರುವ ಪ್ರಗತಿಪರ ಬದಲಾವಣೆಗಳ ಕುರಿತು ವಿದ್ವಾಂಸರು ತಮ್ಮ ವಿಚಾರವನ್ನು ಮಂಡಿಸಿದರು.

ತಮಿಳು ಭಾಷೆ-ನಾಳೆಗಳ ನಿರ್ಮಾಣ
ತಮಿಳು ಭಾಷೆಯಲ್ಲಾಗಿರುವ, ಆಗುತ್ತಿರುವ ತ್ವರಿತ ಬದಲಾವಣೆಗಳ ಕುರಿತು ಮಾತನಾಡಿದ ಡಾ.ತಮಿಳ್ ಸೆಲ್ವಿ, ಕರ್ನಾಟಕದಲ್ಲಿ ನಾಳೆಗಳನ್ನು ನಿರ್ಮಾಣ ಮಾಡುವ ಮೊದಲು ನಮ್ಮ ಸೋದರ ಭಾಷೆಗಳಲ್ಲಿ ಏನಾಗುತ್ತಿದೆಯೆಂಬುದನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ವಾಸ್ತವದಲ್ಲಿ ನಮ್ಮಿಂದ ಮಾಡಲಾಗದ ಕಾರ್ಯವನ್ನು ತಮ್ಮ ಕಾವ್ಯಗಳ ಮೂಲಕ ಕವಿಗಳು ಮಾಡುತ್ತಾರೆ. ಭಾಷೆಗೆ ಆ ಅಂತಸ್ಸತ್ವ ಇದೆ. ಹೀಗಾಗಿ ನಾವು ಭಾಷೆಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಇಂದು ನಾವು ಒಳ್ಳೆಯ ಬೀಜಗಳನ್ನು ಬಿತ್ತಿದರೆ ನಾಳೆ ಅದು ಸದೃಢ ಹೆಮ್ಮರವಾಗಲು ಸಾಧ್ಯ. ಆದ್ದರಿಂದ ತುಂಬಾ ಜಾಗೃತಪ್ರಜ್ಞೆಯಿಂದ ನಾವು ಭಾಷೆ-ಸಂಸ್ಕೃತಿಯ ಕೆಲಸವನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು.

‘ತಮಿಳರು ತಮ್ಮ ಭಾಷೆಯನ್ನು ಬೆಳೆಸಲು, ಉಳಿಸಲು ಮಾಡಿದ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಶಾಸ್ತ್ರೀಯ ಸ್ಥಾನಮಾನಕ್ಕಾಗಿ ದಶಕಗಳ ಕಾಲ ಹೋರಾಟ ನಡೆಸಿದ ಅವರು, ಆ ಸ್ಥಾನ ಲಭ್ಯವಾದ ನಂತರ ಸುಮ್ಮನೇ ಕೂರಲಿಲ್ಲ. ತಮಿಳಿನ ಶ್ರೇಷ್ಠ ಕೃತಿಗಳನ್ನು ಇತರೆ ಭಾಷೆಗಳಿಗೆ ಅನುವಾದಿಸಿದರು. ಸಂಗಂ ಸಾಹಿತ್ಯ ಸೇರಿದಂತೆ ಹೆಚ್ಚಿನ ತಮಿಳು ಕೃತಿಗಳು ಬೇರೆ ಭಾಷೆಗಳಲ್ಲಿ ಲಭ್ಯವಿವೆ. ತಮಿಳಿನ ಪಂಚಮವೇದವೆಂದೇ ಖ್ಯಾತವಾಗಿರುವ ತಿರುವಳ್ಳುವರ್ ಬರೆದ ಕೃತಿ ‘ತಿರುಕ್ಕುರಲ್’ ಇಂದು ಜಗತ್ತಿನ 80 ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಭಾಷಾಭಿಮಾನ ಎಷ್ಟಿದೆಯೆಂದರೆ ಇಂದು ತಮಿಳನ್ನು ನಮ್ಮ ರಾಷ್ಟ್ರದ ಎರಡನೇ ಆಡಳಿತ ಭಾಷೆಯಾಗಿ ಮಾಡುವತ್ತ ಅವರ ಹೋರಾಟ ನಡೆದಿದೆ’ ಎಂದರು.

ತಮಿಳು ಭಾಷೆಯ ಜೊತೆ ಕನ್ನಡದ ಪರಿಸ್ಥಿತಿಯನ್ನು ಹೋಲಿಕೆ ಮಾಡಿದ ಡಾ. ತಮಿಳ್ ಸೆಲ್ವಿ, ‘ಕನ್ನಡದಲ್ಲಿ ಇಂತಹ ಪ್ರಯತ್ನಗಳು ಆಗಿದ್ದು ತುಂಬಾ ಕಡಿಮೆ. ಸಾಹಿತ್ಯ ಲೋಕದ ಅತ್ಯಂತ ಶ್ರೇಷ್ಠ ಕೃತಿಗಳಿರುವುದೇ ಕನ್ನಡದಲ್ಲಿ. ಆದರೆ ಇಂದು ಪಂಪ-ರನ್ನರ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದಗೊಂಡಿದ್ದು ತುಂಬಾ ಕಡಿಮೆ. ತಮಿಳರಿಗೆ ಶಾಸ್ತ್ರೀಯ ಸ್ಥಾನ ಸಿಕ್ಕಿತೆಂಬ ಕಾರಣದಿಂದ ಕನ್ನಡಿಗರೂ ಅದಕ್ಕಾಗಿ ಹೋರಾಟ ನಡೆಸಿದರು. ಶಾಸ್ತ್ರೀಯ ಸ್ಥಾನದ ನಂತರ ಮುಂದೇನು ಮಾಡಬಹುದೆಂಬ ಯೋಜನೆ ಹೋರಾಟಗಾರರಿಗೆ ಇಲ್ಲವಾಗಿದೆ.

ತಮಿಳು ನಾಡಿನಲ್ಲಿ ಉನ್ನತ ಪದವಿಗಳನ್ನು, ತಾಂತ್ರಿಕ ವಿಷಯಗಳನ್ನು ತಮಿಳಿನಲ್ಲಿಯೇ ಕಲಿಯುವ ಅವಕಾಶವಿದೆ, ಅಲ್ಲಿನ ಶಾಲೆಗಳಲ್ಲಿ ತಮಿಳು ಕಡ್ಡಾಯಭಾಷೆ. ಆದರೆ ಕರ್ನಾಟಕದಲ್ಲಿ ಇನ್ನೂ ಈ ಬದಲಾವಣೆ ಕಂಡು ಬರಬೇಕಿದೆ. ನಾವು ಶ್ರೇಷ್ಠವಾದ ಕನ್ನಡ ಭಾಷೆಯನ್ನು ಅರ್ಥೈಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ಇದನ್ನು ಸರಿಪಡಿಸಿ ನಮ್ಮತನವನ್ನು ಮೊದಲು ಅರ್ಥ ಮಾಡಿಕೊಂಡಾಗ ಮಾತ್ರ ಸುಂದರ ನಾಳೆಗಳನ್ನು ಕಟ್ಟಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ಮಲಯಾಳಂ ಭಾಷೆ- ನಾಳೆಗಳ ನಿರ್ಮಾಣ
ನಮ್ಮ ಮತ್ತೊಂದು ದ್ರಾವಿಡ ಭಾಷೆ ಮಲೆಯಾಳಂ ಬಗ್ಗೆ ಮಾತನಾಡಿದ ಡಾ. ಮೋಹನ್ ಕುಂಟಾರ್, ‘ಮಲೆಯಾಳಂನಲ್ಲೂ ಕೂಡ ಸುಂದರ ಭಾಷೆಗಳನ್ನು ನಿರ್ಮಾಣ ಮಾಡಬೇಕಾದ ಅವಶ್ಯಕತೆ ಖಂಡಿತ ಇದೆ. ಭಾಷೆ ಕೇವಲ ಪುಸ್ತಕದಲ್ಲಿರಬಾರದು, ಬದಲಿಗೆ ಅದು ಕ್ರಿಯಾತ್ಮಕ ಆಡಳಿತ ಭಾಷೆಯಾಗಿರಬೇಕು ಎಂದು ಕೇರಳ ಸರಕಾರ ಪ್ರಯತ್ನಿಸುತ್ತಿದೆ. ಆಡಳಿತದಲ್ಲಿ, ಶಿಕ್ಷಣದಲ್ಲಿ ಮಲೆಯಾಳಂನ್ನು ಕಡ್ಡಾಯವಾಗಿ ಕಲಿಯಬೇಕೆಂಬ ಅಧಿಸೂಚನೆ ಹೊರಡಿಸಿದೆ. ಸರಕಾರವೇ ಮಲೆಯಾಳಂ ಭಾಷೆಯನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿರುವುದರಿಂದ ಸಕಾರಾತ್ಮಕ ಬದಲಾವಾಣೆಗಳು ಕೇರಳದಲ್ಲಿ ಕಂಡು ಬರುತ್ತಿವೆ’ ಎಂದು ಅವರು ಹೇಳಿದರು.

ಮಲಯಾಳಂ ಭಾಷೆಯ ಬೆಳವಣಿಗೆಗಾಗಿ ದಶಕಗಳಿಂದ ಪೂರಕ ಪ್ರಯತ್ನ ನಡೆಯುತ್ತಿದೆ. ಕೇವಲ ಸರಕಾರಿ ಶಾಲೆಯಲ್ಲಿ ಮಾತ್ರ ಶಿಕ್ಷಣ ಪಡೆಯಬೇಕೆಂಬ ನಿಯಮವನ್ನು ಸರಕಾರ ತಂದದ್ದರಿಂದ ಇಂದಿಗೂ ಕೇರಳದಲ್ಲಿ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವುದಕ್ಕೆ ತುಂಬಾ ಮಹತ್ವವಿದೆ. ವಾಚನ ಪದ್ಧತಿ ಕೇರಳದಲ್ಲಿ ಬೆಳೆದು ಬಂದಿದೆ. ಎಲ್ಲರಿಗೂ ಜ್ಞಾನವನ್ನು ತಲುಪಿಸಬೇಕೆಂಬುದು ಅಲ್ಲಿನ ಜನರ ವಿಚಾರ. ಅದಕ್ಕಾಗಿ ಗ್ರಂಥಾಲಯ ಸೇವೆಯನ್ನು ಅಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಉತ್ತಮ ರೀತಿಯಲ್ಲಿ ಗ್ರಂಥಾಲಯ ಸೇವೆಯನ್ನು ನೀಡಿದವರಿಗೆ ವಿಶೇಷ ರೀತಿಯ ಸಂಭಾವನೆಯನ್ನೂ ಸರಕಾರದಿಂದ ನೀಡಲಾಗುತ್ತದೆ. ಹೀಗಾಗಿ ಓದುವವರ ಹಾಗೂ ಓದಿಸುವವರ ಪ್ರಮಾಣ ಕೇರಳದಲ್ಲಿ ಹೆಚ್ಚಿದೆ ಎಂದು ಮೋಹನ್ ಕುಂಟಾರ್ ಹೇಳಿದರು.

ಮಲಯಾಳಂ ಭಾಷಾ ಬೆಳವಣಿಗೆಗೆ ಇತರ ಕಾರ್ಯಗಳು ಹೇಗೆ ಸಹಕಾರಿಯಾಗಿವೆ ಎಂಬುದನ್ನು ವಿಮರ್ಶಿಸಿದ ಅವರು, ‘ಶಾಲಾ ಕಲೋತ್ಸವಗಳು, ಕೇರಳ ಮಾಧ್ಯಮ ಹಾಗೂ ಶ್ರೇಷ್ಠ ಕೃತಿಗಳನ್ನು ಇತರೆ ಭಾಷೆಗಳಿಗೆ ಅನುವಾದಿಸುವ ಕಾರ್ಯಗಳು ಮಲೆಯಾಳಂ ಭಾಷೆಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿನ ಜನರ ಪಾಲ್ಗೊಳ್ಳುವಿಕೆ. ಸರಕಾರ ಏನು ಮಾಡುತ್ತದೆ ಎನ್ನುವುದಕ್ಕಿಂತ ಸರಕಾರದಿಂದ ತಮಗೇನು ಬೇಕು ಎನ್ನುವುದನ್ನು ಜನ ನಿರ್ಧರಿಸುತ್ತಾರೆ.ಹೀಗಾಗಿ ಮಲೆಯಾಳಂ ಪ್ರಗತಿ ಹೊಂದುತ್ತಿದೆ ಎಂದರು.

ಕನ್ನಡ ಭಾಷೆ- ನಾಳೆಗಳ ನಿರ್ಮಾಣ
ಕನ್ನಡ ಭಾಷೆ ನಾಳೆಗಳ ನಿರ್ಮಾಣದ ಬಗ್ಗೆ ಮಾತನಾಡಿದ ಪ್ರೊ. ಕಿಕ್ಕೇರಿ ನಾರಾಯಣ್, ‘ನಮ್ಮಲ್ಲಿ ಭಾಷೆ ಅಂದ್ರೆ ಸಾಹಿತ್ಯ ಮಾತ್ರ ಎಂಬ ಭಾವನೆಯಿದೆ. ಆದರೆ ಸಾಹಿತ್ಯಕ್ಕೂ ಮಿಗಿಲಾದ ಅನೇಕ ಸಂಗತಿಗಳು ನಮ್ಮಲಲಿವೆ. ಇದನ್ನು ಅರ್ಥೈಸಿಕೊಳ್ಳುವಲ್ಲಿ ಕನ್ನಡಿಗರು ಸೋಲುತ್ತಿದ್ದಾರೆ. ನಾಳೆಗಳ ನಿರ್ಮಾಣ ಮಾಡುವ ಮೊದಲು ನಿನ್ನೆಯನ್ನು ಅರ್ಥೈಸಿಕೊಳ್ಳಬೇಕು. ನಿನ್ನೆಯನ್ನು ಅರಿತಾಗ ಮಾತ್ರ ನಳೆಗಳನ್ನು ನಿರ್ಮಿಸಲು ಸಾಧ್ಯ’ ಎಂದರು.

ಭಾಷಾಲೋಕದಲ್ಲಿ ಯಾವಾಗಲೂ ಹೊಸ ಬದಲಾವಣೆಗಳಾಗುತ್ತಿರುತ್ತವೆ. ಈ ಹೊಸ ಬದಲಾವಣೆಗಳಿಗೆ ನಮ್ಮನ್ನು ತೆರೆದುಕೊಂಡಾಗ ಮಾತ್ರ ಭಾಷೆಯನ್ನು ಕಟ್ಟಲು ಸಾಧ್ಯ. ಇಂದಿನ ಕರ್ನಾಟಕಕೆ ಇದರ ಅವಶ್ಯಕತೆ ಖಂಡಿತವಾಗಿಯೂ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English