ಮಂಗಳೂರು: 500 ಮತ್ತು 1000 ರೂ. ಮುಖಬೆಲೆಯ ನೋಟು ರದ್ಧತಿಯಿಂದಾಗಿ ಸ್ವಚ್ಛ ಭಾರತದ ಬದಲಾಗಿ ಸ್ವಚ್ಛ ಬಿಜೆಪಿ ಆಗುವ ದಿನ ದೂರವಿಲ್ಲ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ರದ್ಧತಿಯಿಂದಾಗಿ ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರ ಎಪಿಎಂಸಿ ಚುನಾವಣೆ, ಊಂಛ್ನ ಸ್ಥಳೀಯ ಸಂಸ್ಥೆಗಳ ಚುನಾವಣೆ, ಗುಜರಾತ್ ಪುರಸಭೆ ಚುನಾವಣೆಗಳಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಹೀಗೆ ಮುಂದುವರಿದಲ್ಲಿ ಸ್ವಚ್ಛ ಭಾರತದ ಬದಲಾಗಿ ಸ್ವಚ್ಛ ಬಿಜೆಪಿ ಆಗುವ ದಿನ ದೂರವಿಲ್ಲ ಎಂದು ಪರಿಹಾಸ್ಯ ಮಾಡಿದರು.
ಹೊಸದಾಗಿ ಬಂದಿರುವ 2000 ರೂ. ಮುಖಬೆಲೆಯ ನೋಟು ಮೇಲ್ನೋಟಕ್ಕೆ ಅಮೆರಿಕನ್ ಡಾಲರ್‌ನಂತಿದೆ. ಪ್ರತಿ ವಿಚಾರಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕವನ್ನು ಅನುಕರಣೆ ಮಾಡುತ್ತಿದ್ದಾರೆ. ಅದು ತಪ್ಪು. ದೇಶದ ಎಲ್ಲಾ ಸಂಸದರು ಎಟಿಎಂಗಳಿಗೆ ತೆರಳಿ ಜನರಿಗೆ ತೊಂದರೆಯಾಗದಂತೆ ಹಣ ನೀಡಬೇಕು. ಜನರಿಗಾಗುತ್ತಿರುವ ತೊಂದರೆಯನ್ನು ನಿವಾರಿಸಲು ಆಗ್ರಹಿಸಿ ಸೋಮವಾರದಿಂದ ಆರಂಭವಾಗುವ ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
Click this button or press Ctrl+G to toggle between Kannada and English