ಮಂಗಳೂರು: ಮಂಗಳೂರು ಹಳೆ ಬಂದರು ಅಳಿವೆ ಬಾಗಿಲಲ್ಲಿ ತುಂಬಿರುವ ಹೂಳು ಹೊರ ತೆಗೆಯಲು ಕೊನೆಗೂ ಯಂತ್ರ ಬಂದಿದೆ. ಮುಂದಿನ 90 ದಿನಗಳಲ್ಲಿ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳಲಿದೆ.
ಹಳೆ ಬಂದರಿನಲ್ಲಿ ಹೂಳು ತುಂಬಿರುವ ಪರಿಣಾಮ ಅವಘಡಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರು ಶಾಸಕ ಜೆ.ಆರ್.ಲೋಬೊ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಂಬೈನಿಂದ ಈ ಹೂಳೆತ್ತುವ ಯಂತ್ರವನ್ನು ತರಿಸಲಾಗಿದೆ.
99.50 ಲಕ್ಷ ರೂಪಾಯಿ ವೆಚ್ಚದ ಈ ಹೂಳೆತ್ತುವ ಕಾಮಗಾರಿಯೂ ನಿಗದಿತ 90 ದಿನಗಳ ಅವಧಿಗೆ ಮುನ್ನವೇ ಮುಗಿಯಲಿದೆ. ಸುಮಾರು ಎರಡು ತಿಂಗಳ ಒಳಗೆ ಬಂದರಿನಲ್ಲಿ ಹೂಳು ತೆಗೆದು ದೋಣಿಗಳ ಸಾಗಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬಂದರಿನಲ್ಲಿ 2.1 ಮೀಟರ್ ಮಾತ್ರ ಆಳವಿದ್ದು ಇದನ್ನು 4 ಮೀಟರಿಗೇರಿಸಲಾಗುವುದು. ಇದರಿಂದ ವಾಣಿಜ್ಯ ವ್ಯವಹಾರ ಹೆಚ್ಚಾಗುವುದು. ಜೊತೆಗೆ ಸುಮಾರು 37 ಸಾವಿರ ಕ್ಯೂಸೆಕ್ಸ್ ಮರಳು ತೆಗೆಯಲಾಗುವುದು ಎಂದರು.
ಅಳಿವೆ ಬಾಗಿಲಲ್ಲಿ ಹೂಳುತೆಗೆದರೆ ದೋಣಿಗಳು ಅವಘಡವಿಲ್ಲದೆ ಸರಾಗವಾಗಿ ಹೋಗಲು ಅನುಕೂಲವಾಗುವುದು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸುವಂತೆ ಮುಂಬೈ ಮೂಲದ ಸಂಸ್ಥೆಗೆ ಹೇಳಲಾಗಿದೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲದಂತೆ ಕೆಲಸ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು. ಸುಮಾರು 10 ವರ್ಷಗಳಿಂದ ಅಳಿವೆ ಬಾಗಿಲಲ್ಲಿ ಹೂಳು ತುಂಬಿಕೊಂಡು ದೋಣಿಗಳು ಓಡಾಡಲು ತೊಂದರೆಯುಂಟಾಗಿ ವ್ಯವಹಾರ ಸ್ಥಗಿತಗೊಂಡಿತ್ತು.
Click this button or press Ctrl+G to toggle between Kannada and English