ಮಂಗಳೂರು: ದಾದಿಯರ ವಸತಿಗೃಹದಿಂದ ಬೀಗ ಮುರಿದು 14ಪವನ್ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ತಾಲೂಕಿನ ಬಾಯಾರುಪದವು ಕ್ಯಾಂಪ್ಕೋ ನಿವಾಸಿ ಇಬ್ರಾಹಿಂ ಮುಜಾಮಲ್ (20) ಎಂಬಾತನೇ ಬಂಧಿತ ಆರೋಪಿ. ಸುಬ್ರಹ್ಮಣ್ಯ, ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ಅಳಿಕೆ ಸರ್ಕಾರಿ ಆಸ್ಪತ್ರೆಯ ದಾದಿಯರ ವಸತಿಗೃಹದಲ್ಲಿ ಕಳ್ಳತನ ಬಳಿಕ ತಲೆಮರೆಸಿಕೊಂಡಿದ್ದ. ಪೊಲೀಸರು ತನಿಖೆ ಕೈಬಿಟ್ಟಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಊರಿಗೆ ಹಿಂದಿರುಗಿ ಕರ್ನಾಟಕದೆಡೆಗೆ ಸೋಮವಾರ ಆಗಮಿಸಿದ್ದಾಗ ಪೊಲೀಸರು ಕನ್ಯಾನದಲ್ಲಿ ಬಂಧಿಸಿದ್ದಾರೆ.
ಕಳ್ಳತನ ಮಾಡಿದ್ದ ಹೆಚ್ಚಿನ ಬಂಗಾರವನ್ನು ಇಬ್ರಾಹಿಂ ತನ್ನ ಸ್ನೇಹಿತನ ಕೈಯಲ್ಲಿ ಕೊಟ್ಟಿರುವುದಾಗಿ ಹೇಳಿದ್ದು, ಪೊಲೀಸರು ಮಾಹಿತಿ ಪಡೆದು ಅವನ ಹತ್ತಿರವಿದ್ದ 1.5 ಪವನ್ ಚಿನ್ನ ವಶಪಡಿಸಿಕೊಂಡು, ಇನ್ನೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕೆಲವು ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳನನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಬೊರಸೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೇದಮೂರ್ತಿ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಸಹಾಯಕ ಅಧೀಕ್ಷಕ ರವೀಶ್ ಸಿ.ಆರ್. ನೇತೃತ್ವದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬಿ. ಕೆ. ಮಂಜಯ್ಯ, ವಿಟ್ಲ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
Click this button or press Ctrl+G to toggle between Kannada and English