ಬೆಳಗಾವಿ: ಅದ್ದೂರಿ ಮದುವೆ ಎಂಬ ಕಾರಣಕ್ಕೆ ಬಿಜೆಪಿಯ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆಯಿಂದ ದೂರ ಉಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಕಾರಣಕ್ಕೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ರಮೇಶ್ ಜಾರಕಿಹೊಳಿ ಅವರ ಪುತ್ರನ ಮದುವೆ ಸಂಭ್ರಮದಿಂದ ದೂರ ಉಳಿದಿದ್ದರು. ಆದರೆ ಇದೀಗ ಅದ್ದೂರಿ ಮದುವೆ ಹೋಗಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಜಾರಕಿಹೊಳಿ ಮಗನ ಮದುವೆಗೆ ಶುಭಾಶಯ ಹೇಳಲು ಖಾಸಗಿ ಹೆಲಿಕಾಪ್ಟರ್ ಬಳಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.
ಸಿಎಂ ಅವರು ಹೆಲಿಕಾಪ್ಟರ್ ನಲ್ಲಿ ಬೆಳಗಾವಿಯಿಂದ ಗೋಕಾಕ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಚಿವ ಕೆಜೆ ಜಾರ್ಜ್, ಜಿ ಪರಮೇಶ್ವರ್, ಹೆಚ್. ಎಂ.ರೇವಣ್ಣ ಹಾಗೂ ಅಶೋಕ್ ಪಟ್ಟಣ್ ಜೊತೆಗಿದ್ದರು.
ಬೆಳಗಾವಿಯಿಂದ ಗೋಕಾಕ್ ಗೆ ಕೇವಲ 80 ಕಿಲೋಮೀಟರ್ ದೂರ. ಅದ್ದೂರಿ ಮದುವೆ ಬಗ್ಗೆ ಟೀಕಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ದುಬಾರಿ ವೆಚ್ಚದಲ್ಲಿ ಖಾಸಗಿ ಹೆಲಿಕಾಪ್ಟರ್ ಮೂಲಕ ಜಾರಕಿಹೊಳಿ ಮನೆಗೆ ತೆರಳಿರುವ ಬಗ್ಗೆ ವಿಪಕ್ಷಗಳು ಕಟುವಾಗಿ ಟೀಕಿಸಿವೆ. ಸುವರ್ಣ ಸೌಧಕ್ಕೆ ಹೆಲಿಕಾಪ್ಟರ್ ಬಂದಿರುವುದು ಇದೇ ಮೊದಲು. ನೇರವಾಗಿ ಸಿಎಂ ಸುವರ್ಣಸೌಧದೊಳಗೆ ಬಂದಿಳಿಯಲು ಸೌಧದ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.
ನಾನು ಸಿಎಂ ಆಗಿದ್ದಾಗ ಎಂದೂ ವಿಶೇಷ ವಿಮಾನ ಬಳಸಿಲ್ಲ. ಜಾರಕಿಹೊಳಿ ಮಗನ ಮದುವೆಗೆ ಶುಭಾಶಯ ಕೋರಲು ಹೋಗಿದ್ದು ತಪ್ಪಲ್ಲ, ಆದರೆ ಪರಿಸ್ಥಿತಿಗೆ ಅನುಗುಣವಾಗಿ ನಿಲುವು ಬದಲಾಯಿಸಬೇಕು. ದುಬಾರಿ ಮದುವೆ ವಿರೋಧಿಸುವ ಸಿದ್ದರಾಮಯ್ಯ, ಈ ದುಂದು ವೆಚ್ಚ ಮಾಡಿದ್ದು ಸರಿಯೇ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಅದ್ದೂರಿ ಮದುವೆಗೆ ಹೋಗೋದಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಬರಗಾಲವಿದ್ದರೂ ಸಿಎಂ ಈಗ ಹೆಲಿಕಾಪ್ಟರ್ ನಲ್ಲಿ ತೆರಳಿ ಶುಭಾಶಯ ಕೋರಿದ್ದಾರೆ. ಸಿಎಂ ನಡವಳಿಕೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಟೀಕಿಸಿದ್ದಾರೆ.
Click this button or press Ctrl+G to toggle between Kannada and English