ಬೆಂಗಳೂರು: ಹಳೆ ನೋಟುಗಳ ನಿಷೇಧದ ವಿರುದ್ಧ ನ.28ರಂದು ಭಾರತ ಬಂದ್ ನಡೆಯಲಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಇದು ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆಯಷ್ಟೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಜೆಡಿಎಸ್ ಈ ಪ್ರತಿಭಟನೆಯಿಂದ ದೂರವಿರಲಿದ್ದು, ರಾಜ್ಯದಲ್ಲಿ ಎಡಪಕ್ಷಗಳ ಪ್ರಾಬಲ್ಯ ಇಲ್ಲದಿರುವುದರಿಂದ ಪ್ರತಿಭಟನೆಯು ಬಂದ್‌ನಂತಹ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿಲ್ಲ. ಇನ್ನು ಬಿಜೆಪಿ ಸಹಜವಾಗಿಯೇ ಈ ದಿನ ತಟಸ್ಥವಾಗಿರಲಿದೆ.
ಕೇಂದ್ರ ಸರ್ಕಾರದ 500 ಮತ್ತು 1,000 ಮುಖಬೆಲೆ ನೋಟು ಚಲಾವಣೆ ಹಿಂಪಡೆದ ನಿರ್ಧಾರ ಖಂಡಿಸಿ ವಿಪಕ್ಷಗಳು ಸೋಮವಾರ ದೇಶಾದ್ಯಂತ ಹಮ್ಮಿಕೊಂಡಿರುವ “ಆಕ್ರೋಶ್ ದಿವಸ್’ನ್ನು ಯಶಸ್ವಿಗೊಳಿಸಲು ಆಡಳಿತಾರೂಢ ಕಾಂಗ್ರೆಸ್ ಸಜ್ಜಾಗಿದೆ. ಆದರೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಮ್ಮ ವಿರೋಧವಿದ್ದರೂ ಆಕ್ರೋಶ್ ದಿವಸ್‌ಗೆ ಬೆಂಬಲವಿಲ್ಲ ಎಂದು ಜೆಡಿಎಸ್ ಸ್ಪಷ್ಟಪಡಿಸಿದೆ.
ಬಿಜೆಪಿ ಈ ಪ್ರತಿಭಟನೆಗೆ ಪ್ರತಿಯಾಗಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಮೌನವಾಗಿರಲು ನಿರ್ಧರಿಸಿದೆ. ಇನ್ನು ಎಡಪಕ್ಷಗಳು ರಾಜ್ಯದಲ್ಲಿ ಅಷ್ಟಾಗಿ ಪ್ರಭಾವ ಹೊಂದಲ್ಲದೇ ಇರುವುದರಿಂದ ಪ್ರತಿಭಟನೆಯು ಬಂದ್‌ನಂಥ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ತೀರಾ ಕಡಮೆ. ಆದರೆ, ಸ್ಪಲ್ಪ ಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ “ಆಕ್ರೋಶ್ ದಿವಸ್’ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಆಕ್ರೋಶ್ ದಿವಸ್ ಅನ್ನು ಭಾರತ್ ಬಂದ್ ಮಾದರಿಯಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದ್ದು, ಇದು ಕೇಂದ್ರದ ನಿರ್ಧಾರದ ವಿರುದ್ಧ ಪ್ರತಿಭಟನೆಯಷ್ಟೇ ಎಂದು ಈಗಾಗಲೇ ರಾಜ್ಯ ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ. ಹೀಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ.
ಆದರೆ ಹೈಕಮಾಂಡ್ ಸೂಚನೆಯಂತೆ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ರಾಜ್ಯದಲ್ಲಿ ಶತಾಯಗತಾಯ ಆಕ್ರೋಶ್ ದಿವಸ್‌ನ್ನು ಯಶಸ್ವಿಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿಯೇ ಸೋಮವಾರ ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನದ ಕಲಾಪವನ್ನೇ ರದ್ದುಗೊಳಿಸಲಾಗಿದೆ.
ಆಕ್ರೋಶ್ ದಿವಸ್ ಆಚರಣೆ ಬಗ್ಗೆ ಕೆಪಿಸಿಸಿಗೆ ಸೂಚನೆ ನೀಡಿರುವ ಏಐಸಿಸಿಯು ರಾಜ್ಯಾದ್ಯಂತ ಬ್ಲಾಕ್‌ಮಟ್ಟದಲ್ಲಿ ಕೇಂದ್ರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಯಬೇಕು. ನೋಟು ನಿಷೇಧದಿಂದ ಜನ ಸಾಮಾನ್ಯರು ಅನುಭವಿಸುತ್ತಿರುವ ಪ್ರತಿಯೊಂದು ಸಮಸ್ಯೆಯನ್ನೂ ಪಟ್ಟಿ ಮಾಡಿ ಆಯಾ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ.
ಇದರಿಂದ ಕಲಾಪಕ್ಕೆ ರಜೆ ಘೋಷಿಸಿ ಪರೋಕ್ಷವಾಗಿ ನೆರವಾಗಿರುವ ರಾಜ್ಯ ಸರ್ಕಾರ, ಎಲ್ಲಾ ಶಾಸಕರು ತಮ್ಮ ಸ್ವ ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರನ್ನು ಹೋರಾಟಕ್ಕೆ ಸಂಘಟಿಸುವಂತೆ ಮಾಡಿದೆ.
ಈಗಾಗಲೇ ಹೈಕಮಾಂಡ್ ಕೆಪಿಸಿಸಿಗೆ ಹೋರಾಟದ ಬಗ್ಗೆ ಹಲವು ಸೂಚನೆಗಳನ್ನು ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಕಾಳಧನಿಕರಿಗಿಂತ ಹೆಚ್ಚು ಜನಸಾಮಾನ್ಯರೇ ಕಷ್ಟ ಪಡುವಂತಾಗಿದೆ. ದೇಶಾದ್ಯಂತ ಜನ ಎಟಿಎಂ, ಬ್ಯಾಂಕ್‌ಗಳ ಮುಂದೆ ಕ್ಯೂ ನಿಂತು ಪ್ರಾಣ ಬಿಡುವ ಸಂಧರ್ಭ ಏರ್ಪಟ್ಟಿದೆ. ನೋಟು ರದ್ದತಿಯಿಂದ ರೈತರ, ಯುವಕರ ಹಾಗೂ ಅಸಂಘಟಿತ ಕಾರ್ಮಿಕರ ಜೀವನ ದುಸ್ಥರಗೊಂಡಿದೆ ಎಂಬುದನ್ನು ಜನರಿಗೆ ತಲುಪಿಸಬೇಕು. ಹೀಗಾಗಿ ಬ್ಲಾಕ್‌ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಕೇಂದ್ರದ ನಿರ್ಧಾರದ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕು. ಜನರ ಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಜನರ ಪರ ಮನವಿ ಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಹೀಗಾಗಿ ಕಾಂಗ್ರೆಸ್ ಅಧಿಕಾರದಲ್ಲಿರುವ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲಿ ಆಕ್ರೋಶ್ ದಿವಸ್‌ನ್ನು ಯಶಸ್ವಿಗೊಳಿಸಲು ಕೆಪಿಸಿಸಿ ಸಿದ್ಧತೆ ನಡೆಸಿದೆ. ಸಿದ್ಧತೆಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಶನಿವಾರವೇ ಬೆಂಗಳೂರು ನಗರದಲ್ಲಿ ಬೀಡು ಬಿಟ್ಟಿದ್ದಾರೆ.
ರಾಜ್ಯ ಗೃಹ ಸಚಿವರೂ ಆಗಿರುವ ಕೆಪಿಸಿಸಿ ಅಧ್ಯಕ್ಷರು ನೇರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ ವ್ಯವಸ್ಥಿತವಾಗಿ ಆಚರಿಸುವ ಆಕ್ರೋಶ್ ದಿವಸ್‌ನಲ್ಲಿ ಮಾತ್ರ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ್‌ದಿವಸ್‌ಗೆ ಬೆಂಬಲ ನೀಡದಂತೆ ಅಭಿಯಾನಗಳು ಶುರುವಾಗಿವೆ. ದೇಶಮಟ್ಟದಲ್ಲಿ ವಿಪಕ್ಷಗಳು ಮೋದಿ ನಿರ್ಧಾರದ ವಿರುದ್ಧ ಆಕ್ರೋಶ್ ದಿವಸ್ ಆಚರಣೆಗೆ ಮುಂದಾಗಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕಾಳಧನ ತಡೆಗೆ ಮೋದಿ ತೆಗೆದುಕೊಂಡಿರುವ ನಿರ್ಧಾರ ಪರ ಇರುವಂತೆ ಆನ್‌ಲೈನ್ ಅಭಿಯಾನ ನಡೆಸುತ್ತಿದ್ದಾರೆ. ದೇಶದ ಹಿತಕ್ಕಾಗಿ ಕೆಲವು ದಿನ ಕಷ್ಟ ತಡೆದುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಹಮ್ಮಿಕೊಳ್ಳುತ್ತಿರುವ ಆಕ್ರೋಶ್‌ದಿವಸ್‌ಗೆ ಪ್ರತಿಯಾಗಿ ಯಾವುದೇ ಕಾರ್ಯಕ್ರಮ ಮಾಡದಿರಲು ಬಿಜೆಪಿಯು ನಿರ್ಧರಿಸಿದೆ. ನೋಟು ನಿಷೇಧದ ಪ್ರಧಾನಮಂತ್ರಿಗಳ ನಿರ್ಣಯದಿಂದ ಮಧ್ಯಮ ಹಾಗೂ ದೀರ್ಘಾವಧಿಯಲ್ಲಿ ದೇಶಕ್ಕೆ ಒಳ್ಳೆಯದಾಗಲಿದೆ ಎಂಬುದನ್ನು ಜನ ಈಗಾಗಲೇ ಮನಗಂಡಿದ್ದಾರೆ. ಕಪ್ಪು ಹಣದ ವಿರುದ್ಧ ಸಾರಿರುವ ಸಮರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿದರೆ ತನ್ನನ್ನು ತಾನೇ ಬೆತ್ತಲು ಮಾಡಿಕೊಂಡಂತೆ. ಹೀಗಾಗಿ ನಾವು ಅಧಿಕೃತವಾಗಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನೋಟುಗಳ ಚಲಾವಣೆ ರದ್ದು ನಿರ್ಧಾರದಿಂದ ಜನ ಸಾಮಾನ್ಯರಿಗೆ ಈಗಾಗಲೇ ತೊಂದರೆ ಆಗಿದೆ. ಇದೀಗ ಆಕ್ರೋಶ್ ದಿವಸ್ ಹೆಸರಿನಲ್ಲಿ ಮತ್ತಷ್ಟು ತೊಂದರೆ ನೀಡದಿರಲು ನಿರ್ಧರಿಸಿರುವುದಾಗಿ ಜೆಡಿಎಸ್ ರಾಜಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪ್ಪು ಹಣ ನಿಯಂತ್ರಣಕ್ಕೆ ಮೋದಿ ಅವರ ನಿರ್ಧಾರ ಸರಿ ಇದ್ದರೂ ಸಮರ್ಪಕ ಅನುಷ್ಠಾನ ಆಗಿಲ್ಲ. ಕಾಳಧನಿಕರು ಈಗಾಗಲೇ ಕಪ್ಪು ಹಣ ಬದಲಿಸಿಕೊಂಡಿದ್ದಾರೆ. ಈ ನಿರ್ಧಾರದಿಂದ ದೇಶದ ಜನತೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಜನ ಸಾಮಾನ್ಯರು ಪರದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಮತ್ತೆ ಜನರಿಗೆ ಆಕ್ರೋಶ್ ದಿವಸ್ ಹೆಸರಿನಲ್ಲಿ ತೊಂದರೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಆಕ್ರೋಶ್‌ದಿವಸ್‌ಗೆ ಬೆಂಬಲ ನೀಡಲು ಬೆಳಗಾವಿ ವಿಧಾನಮಂಡಲ ಅಧಿವೇಶನ ರದ್ದುಗೊಳಿಸಲಾಗಿದೆ ಎಂದು ರಾಜ್ಯದ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ಅವರು, ®ಆಕ್ರೋಶ್ ದಿವಸ್‌ಗೆ ರಾಜ್ಯ ಸರ್ಕಾರ ನೇರವಾಗಿ ಬೆಂಬಲಿಸಿದೆ. ಇಂತಹ ಘಟನೆ ಇತಿಹಾಸದಲ್ಲೇ ಮೊದಲು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English