ಮಂಗಳೂರು: ಕಂಬಳ ನಿಷೇಧ ಕುರಿತಂತೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(ಪೆಟಾ) ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಕ್ರೀಡೆಗೆ ಮಧ್ಯಂತರ ತಡೆ ನೀಡಿರುವುದು ತುಳುನಾಡಿನ ಜನತೆಯ ಆತ್ಮಾಭಿಮಾನವನ್ನು ಪ್ರಶ್ನಿಸುವಂತಾಗಿದೆ. ಕಂಬಳ ತುಳುನಾಡಿನ ಸಂಸ್ಕೃತಿಯ ಒಂದು ಭಾಗವೇ ಆಗಿದ್ದು, ಯಾವುದೇ ಕಾರಣಕ್ಕೂ ಈ ಕ್ರೀಡೆ ನಿಲ್ಲಬಾರದು. ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ವಿತಂಡವಾದ ಒಪ್ಪುವಂಥದಲ್ಲ ಎಂದು ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಾಣಿದಯಾ ಸಂಘದವರಿಗೆ ಎತ್ತು, ಕೋಣ, ಇತರ ಜಾನುವಾರುಗಳ ಬಗ್ಗೆ, ಅವುಗಳ ದೇಹರಚನೆ ಬಗ್ಗೆ ಸಮರ್ಪಕ ಮಾಹಿತಿಯೇ ಇಲ್ಲ. ಪ್ರಸ್ತುತ ಜಲ್ಲಿಕಟ್ಟು, ಎತ್ತಿನಗಾಡಿ ಓಟ ಹಾಗೂ ಕಂಬಳ ಒಂದೇ ನಿಯಮದಡಿ ಇವೆ. ಜಲ್ಲಿಕಟ್ಟು, ಎತ್ತಿನಗಾಡಿ ಓಟದಲ್ಲಿ ಸಾಕಷ್ಟು ಹಿಂಸೆ ನೀಡಲಾಗುತ್ತದೆ. ಆದರೆ ಕಂಬಳದಲ್ಲಿ ಆ ರೀತಿ ಹಿಂಸೆ ನೀಡಲಾಗುವುದಿಲ್ಲ. ಕಂಬಳ ಉಳಿಸಲು ದ.ಕ. ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿಯು ವಿವಿಧ ಹಂತದಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದು ತುರವೇ ಬೆಂಬಲ ವ್ಯಕ್ತಪಡಿಸಲಿದೆ ಎಂದು ಅವರು ಹೇಳಿದರು.
ತುಳುನಾಡು ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಪ್ರಶಾಂತ್ ಭಟ್ ಕಡಬ, ಸಿರಾಜ್ ಅಡ್ಕರೆ, ಆನಂದ್ ಅಮೀನ್ ಅಡ್ಯಾರ್, ರಕ್ಷಿತ್ ಬಂಗೇರ ಕುಡುಪು ಉಪಸ್ಥಿತರಿದ್ದರು
Click this button or press Ctrl+G to toggle between Kannada and English