ಬೆಳ್ತಂಗಡಿ : ಜಾನಪದ ಕಲೆಗಳು ಮತ್ತು ಸಂಸ್ಕೃತಿ ಇಂದು ವಿನಾಶದಂಚಿನಲ್ಲಿದ್ದು ಅವುಗಳ ಸಂರಕ್ಷಣೆಯಾಗಬೇಕು. ಮುಂದಿನ ಪೀಳಿಗೆಗೆ ಈ ಬಗ್ಗೆ ಅರಿವು ಜಾಗೃತಿ ಮೂಡಿಸಬೇಕು. ಈ ದಿಸೆಯಲ್ಲಿ ಸರ್ಕಾರ, ಅಕಾಡೆಮಿಗಳು ಮತ್ತು ಮಠ-ಮಂದಿರಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.
ಅವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸೋಮವಾರ ಆಯೋಜಿಸಲಾದ ಸಾಹಿತ್ಯ ಸಮ್ಮೇಳನದ 84ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಸಮಾಜ ಸುಧಾರಣೆಯ ಜವಾಬ್ದಾರಿ ಆತನಿಗೆ ಇದೆ. ಯುವಜನತೆ ಸಾಹಿತ್ಯದ ಬಗ್ಗೆ ಒಲವು, ಅಭಿಮಾನ ಮತ್ತು ಆಸಕ್ತಿ ಹೊಂದಿರಬೇಕು. ಸರ್ವರ ಹಿತವೇ ಸಾಹಿತ್ಯದ ಉದ್ದೇಶವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಬದುಕನ್ನು ಹಸನುಗೊಳಿಸಿ ಸುಖಮಯವನ್ನಾಗಿ ಮಾಡುವ ಬಗ್ಗೆ ಚಿಂತನೆ-ಮಂಥನ ನಡೆಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ವ್ಯಕ್ತಿಗೆ ಹಾಗೂ ಸಮಾಜಕ್ಕೆ ಹಿತವನ್ನುಂಟು ಮಾಡುವ ಸಾಹಿತ್ಯಕ್ಕೆ ಸಾರ್ವತ್ರಿಕವಾದ ಬೆಂಬಲ ಅಗತ್ಯವಾಗಿದೆ ಎಂದರು.
ಸಾಹಿತಿ ಬೆಂಗಳೂರಿನ ಎಂ. ಎನ್. ವ್ಯಾಸರಾವ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ವಸುಧೇಂದ್ರ, ಸುಳ್ಯದ ಡಾ. ವೀಣಾ ಮತ್ತು ವಿಜಯವಾಣಿ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English