ಪುತ್ತೂರು: ಮೂವರು ಯುವಕರು ತಂದೆ-ತಾಯಿ ಇಲ್ಲದ ಹಸುಗೂಸನ್ನು ಬಾಡಿಗೆ ಮನೆಯಲ್ಲಿ ಸಾಕಲು ಯತ್ನಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದರಿಂದ ಮಕ್ಕಳ ಕಳ್ಳರ ಜಾಲ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಂದೆ ತಾಯಿ ಇಲ್ಲದ ಸುಮಾರು 55 ದಿನಗಳ ಗಂಡು ಮಗುವೊಂದನ್ನು ಮೂವರು ಯುವಕರು ಬಂಟ್ವಾಳ ತಾಲೂಕಿನ ಪೆರ್ನೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಸಾಕಲೆತ್ನಿಸಿದ್ದಾರೆ. ಈ ಮಾಹಿತಿಯಂತೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಮಗುವನ್ನು ವಶಕ್ಕೆ ತೆಗೆದುಕೊಂಡರು.
ಮಗುವಿನ ತಾಯಿ ನೇಪಾಳಕ್ಕೆ ಹೋಗಿದ್ದ ಕಾರಣಕ್ಕೆ ಮಗುವನ್ನು ಆರೈಕೆ ಮಾಡಲು ಮಗುವಿನ ತಂದೆ ವಿನಂತಿಸಿದ ಹಿನ್ನೆಲೆಯಲ್ಲಿ ತಂದಿರುವುದಾಗಿ ಶಂಕಿತ ಮೂವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವಿಚಾರಣೆ ನಡೆಯುತ್ತಿದೆ. ಬೆಂಗಳೂರಿನ ಮಹಮ್ಮದ್ ಉದೈಫ್ (28), ಹಿರೆಬಂಡಾಡಿ ನಿವಾಸಿಗರಾದ ಸಿಯಾಬ್ (24) ಸಮೀರ್ (21) ಎಂಬವರು, ಸೋಮವಾರ ಮುಂಜಾನೆ ಪೆರ್ನೆಯಲ್ಲಿ ಬಾಡಿಗೆ ಮನೆಯನ್ನು ಗೊತ್ತುಪಡಿಸಿದ್ದು, ಬಳಿಕ ತಮಿಳುನಾಡು ರಾಜ್ಯದ ರಿಜಿಸ್ಟ್ರೇಶನ್ ಹೊಂದಿದ್ದ ಕಾರಿನಲ್ಲಿ ಹೆತ್ತವರಿಲ್ಲದ ಗಂಡು ಮಗುವನ್ನು ತಂದಿದ್ದಾರೆ. ಇದು ಸ್ಥಳೀಯರ ಶಂಕೆಗೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಬಗ್ಗೆ ವ್ಯಾಪಕ ಸುದ್ದಿಯಾಗುತ್ತಿತ್ತು. ಇದೀಗ ಈ ಪ್ರಕರಣ ಎಲ್ಲಾ ಘಟನೆ, ಪ್ರಕರಣಗಳಿಗೆ ಪುಷ್ಟಿ ನೀಡಿದೆ. ಪೊಲೀಸರು ಈಗ ಸರಿಯಾದ ತನಿಖೆ ನಡೆಸಿದರೆ ಪ್ರಕರಣ ಬೆಳಕಿಗೆ ಬರಲಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
Click this button or press Ctrl+G to toggle between Kannada and English