ಮಂಗಳೂರು: ಬೆಂಗಳೂರಿನಲ್ಲಿ ಭಾನುವಾರ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಂಡ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕಪ್ಪುಹಣ ವ್ಯಯ ಮಾಡಲಾಗಿದೆ ಎಂದು ಪೂಜಾರಿ ಆರೋಪಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರ ಸಮಾವೇಶದಲ್ಲಿ ಜನರಿಗೆ ಹಣ ಕೊಟ್ಟು ಕರೆಸಿಲ್ಲ ಎಂಬುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಅಮಿತ್ ಶಾ ರಾಜ್ಯಕ್ಕೆ ಬರುವಾಗ ಕಪ್ಪು ಹಣ ಬಿಳಿಯಾಗಿದೆ. ಯಡಿಯೂರಪ್ಪ ಅವರಂತಹ ನಾಯಕ ರಾಜ್ಯದಲ್ಲಿಲ್ಲ. ಅವರು ಸ್ವಚ್ಛ ಮನುಷ್ಯ ಎಂದು ಪೂಜಾರಿ ಟೀಕಿಸಿದರು.
ರೂ. 500, 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪೂಜಾರಿ, ಎಟಿಎಂ ಮುಂದೆ ಸರತಿ ಸಾಲಿನಲ್ಲಿ ಮೋದಿ ಆಪ್ತರಾದ ಅದಾನಿ, ಅಂಬಾನಿ ಅಥವಾ ಟಾಟಾ ಬಿರ್ಲಾ ನಿಂತಿದ್ದಾರೆಯೇ ಎಂದು ಪ್ರಶ್ನಿಸಿದರು.
ನೋಟು ಅಮಾನ್ಯ ವಿಷಯವನ್ನು ಇವರಿಗೆ ಮೊದಲೇ ಪ್ರಧಾನಿಯವರು ತಿಳಿಸಿದ ಆರೋಪವಿದೆ. ಇವರೆಲ್ಲರೂ ತಮ್ಮ ಬಳಿ ಇದ್ದ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಹಣ ಕರೆನ್ಸಿ, ಬಂಗಾರಗಳಲ್ಲಿ ಈಗಾಗಲೇ ಹೂಡಿಕೆಯಾಗಿದೆ. ಈ ಎಲ್ಲಾ ಆರೋಪಗಳಿಗೆ ಪ್ರಧಾನಿಯವರು ಉತ್ತರಿಬೇಕು ಜಾರಿ ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಹಲವು ಸದಸ್ಯರ ವಿರುದ್ಧ ತಮ್ಮ ಟೀಕಾ ಪ್ರಹಾರವನ್ನು ಮುಂದುವರೆಸಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ವಿವಾದಿತ ಎತ್ತಿನಹೊಳೆ ಯೋಜನೆ ಹಗರಣದಲ್ಲಿ ಶಾಮೀಲಾಗಿರುವ ರಾಜ್ಯದ ಮೂವರು ಸಚಿವರನ್ನು ಕೈ ಬಿಡುವಂತೆ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮೂವರು ಸಚಿವರ ವಿರುದ್ಧ 50 ಕೋಟಿ ರೂ. ಲಂಚ ಸ್ವೀಕರಿಸಿದ ಆರೋಪವಿದೆ. ಗುಪ್ತಚರ ಇಲಾಖೆ ಮೂಲಕ ಮಾಹಿತಿ ಸಂಗ್ರಹಿಸಿ ಆ ಮೂವರು ಸಚಿವರ ಹೆಸರನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ಯೋಜನೆಯ ಗುತ್ತಿಗೆಯನ್ನು ಪಡೆದಿರುವ ಆಂಧ್ರಪ್ರದೇಶದ ಮೂಲದ ಕಳಂಕಿತ ಗುತ್ತಿಗೆ ಕಂಪನಿಗೆ ಸೇರಿದ 16 ಕಡೆ ಆಸ್ತಿಗಳ ಮೇಲೆ ತೆರಿಗೆ ಇಲಾಖೆಗಳು ದಾಳಿ ನಡೆಸಿವೆ. ಈ ಕಂಪನಿಯೊಂದಿಗೆ ರಾಜ್ಯದ ಮೂವರು ಸಚಿವರು 50 ಕೋಟಿ ರೂ.ಗಳ ಲಂಚ ಪಡೆದಿರುವ ಆರೋಪಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಕಳಂಕಿತ ಸಚಿವರೊಂದಿಗೆ ಮುಖ್ಯಮಂತ್ರಿ ಭಾಗಿಯಾಗಿರುವ ಕುರಿತು ಸ್ವಾಭಾವಿಕ ಆರೋಪ ಬರುತ್ತಿದೆ. ಗುಪ್ತಚರ ಇಲಾಖೆ ನಿಮ್ಮ ವ್ಯಾಪ್ತಿಯಲ್ಲಿರುವುದರಿಂದ ಕಳಂಕಿತ ಸಚಿವರ ಮಾಹಿತಿ ಪಡೆದು ಹೆಸರು ಬಹಿರಂಗ ಪಡಿಸಬೇಕು. ಎಷ್ಟು ಲಂಚ ಪಡೆದು ಹಂಚಿಕೊಂಡಿದ್ದಾರೆ ಎನ್ನುವುದನ್ನು ತನಿಖೆ ನಡೆಸಿ ಸಂಪುಟದಿಂದ ಕೈಬಿಡುವಂತೆ ಪೂಜಾರಿ ಒತ್ತಾಯಿಸಿದರು.
ಲಂಚ ಕುರಿತಾಗಿ ರಾಜ್ಯದ ಜನತೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಸಬೂಬು ನೀಡುವುದನ್ನು ನಿಲ್ಲಿಸಿ. ಅದೆಷ್ಟೇ ಪ್ರಭಾವಿಗಳಾದರೂ ರಾಜೀನಾಮೆ ಪಡೆಯಬೇಕು. ರಾಜೀನಾಮೆ ನೀಡದಿದ್ದರೆ ಸಚಿವ ಸ್ಥಾನದಿಂದ ಕಿತ್ತೆಸೆಯಬೇಕು. ಈ ಮೂಲಕ ಪಕ್ಷ ಮತ್ತು ಹೈಕಮಾಂಡ್‌ಗೆ ಆಗುವ ಮುಜುಗರವನ್ನು ತಪ್ಪಿಸಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಈ ಕುರಿತು ಹೈಕಮಾಂಡ್ ಕೂಡಾ ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಒಟ್ಟಾಗಿ ಸಭೆ ನಡೆಸಿದರೆ ಕೇವಲ 5 ನಿಮಿಷಗಳಲ್ಲಿ ಮಹಾದಾಯಿ ಯೋಜನೆ ಸಮಸ್ಯೆ ಬಗೆಹರಿಯಲಿದೆ. ರಾಜ್ಯಕ್ಕೆ ಈ ಯೋಜನೆಗಳು ಅಗತ್ಯವೇ ಎಂದು ಪ್ರಶ್ನಿಸಿದ ಅವರು, ಎತ್ತಿನಹೊಳೆ ಮತ್ತು ಮಹಾದಾಯಿ ಯೋಜನೆಯನ್ನು ಕೈ ಬಿಡಬೇಕು. ಇಲ್ಲದಿದ್ದಲ್ಲಿ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.
ಮೊಬೈಲ್‌ನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮದಂದು ಅರೆನಗ್ನ ಚಿತ್ರ ವೀಕ್ಷಿಸಿದ ಆರೋಪ ಎದುರಿಸುತ್ತಿರುವ ಸಚಿವ ತನ್ವೀರ್ ಸೇಠ್‌ರನ್ನು ಸಂಪುಟದಲ್ಲಿ ಉಳಿಸಿಕೊಂಡಿರುವ ಕುರಿತ ಪ್ರಶ್ನೆಗೆ, ಸಚಿವರನ್ನು ಕೈ ಬಿಡುವ ಧೈರ್ಯ ಮುಖ್ಯಮಂತ್ರಿಗಿಲ್ಲ ಎಂದರು.
ಸೋಮವಾರದಂದು ನಡೆದ `ಆಕ್ರೋಶ್ ದಿವಸ್’ಗೆ ರಾಜ್ಯ ಸರ್ಕಾರದ ಬೆಂಬಲ ಇದ್ದರೂ ಜನರಿಂದ ಕ್ಷೀಣ ಪ್ರತಿಕ್ರಿಯೆ ದೊರೆತಿದೆ. ಜನರು ಮುಖ್ಯಮಂತ್ರಿಯವರಲ್ಲಿ ವಿಶ್ವಾಸ ಕಳೆದುಕೊಂಡಿದ್ದರಿಂದ `ಆಕ್ರೋಶ್ ದಿವಸ್’ಗೆ ಜನ ಬೆಂಬಲ ಸಿಕ್ಕಿಲ್ಲ ಎಂದರು. ಜನರ ವಿಶ್ವಾಸ ಕಳೆದುಕೊಂಡಿರುವ ಮುಖ್ಯಮಂತಿಯವರನ್ನು ಮುಂದೆ ಜನರೇ ಮನೆಗೆ ಕಳುಹಿಸುತ್ತಾರೆ ಎಂದು ಉತ್ತರಿಸಿದರು.
ಬಳ್ಳಾರಿಯಲ್ಲಿ ನಡೆದ `ಆಕ್ರೋಶ್ ದಿವಸ್’ಗೆ ಜನತೆಗೆ ದುಡ್ಡು ನೀಡಿ ಕರೆ ತಂದಿರುವ ಆರೋಪ ಕೇಳಿಬಂದಿದ್ದು, ಇದು ಎಲ್ಲಾ ಪಕ್ಷಗಳಲ್ಲೂ ಇದೆ ಎಂದರು.
Click this button or press Ctrl+G to toggle between Kannada and English