ಮಂಗಳೂರು: ಆಟ ಆಡುತ್ತಿದ್ದ ಇಬ್ಬರು ಪುಟ್ಟ ಬಾಲಕರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಮಂಜೇಶ್ವರದ ಪಿಲಾಂಕಟ್ಟೆಯಲ್ಲಿ ನಡೆದಿದೆ. ಇದರಿಂದ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.
ಪಿಲಾಂಕಟ್ಟೆ-ಉಬ್ರಂಗಳ ರಸ್ತೆ ನಿವಾಸಿ ಹಮೀದ್ ಎಂಬವರ ಪುತ್ರ ರಂಸಾನ್(4) ಹಾಗೂ ಹಮೀದ್ ಸಹೋದರ ಶಬೀರ್ ಎಂಬವರ ಪುತ್ರ ನಸ್ವಾನ್(2) ಮೃತಪಟ್ಟ ಪುಟ್ಟ ಬಾಲಕರು.
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ದಿಢೀರ್ ನಾಪತ್ತೆಯಾಗಿದ್ದರು. ಇದರಿಂದ ಹುಡುಕಾಟ ನಡೆಸುತ್ತಿದ್ದಾಗ ಅಂಗಳದಲ್ಲಿದ್ದ ಬಾವಿಯಲ್ಲಿ ನೀರು ಕದಡುವುದು ಕಂಡು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪರಿಸರ ನಿವಾಸಿಗಳು ಬಾವಿಯಲ್ಲಿ ಶೋಧ ನಡೆಸಿದಾಗ ಮಕ್ಕಳು ಪತ್ತೆಯಾಗಿದ್ದಾರೆ.
ಆದರೆ ಬಾವಿಯಿಂದ ಮೇಲಕ್ಕೆತ್ತುವಷ್ಟರಲ್ಲಿ ರಂಸಾನ್ ಮತ್ತು ನಸ್ವಾನ್ ಇಬ್ಬರೂ ಮೃತಪಟ್ಟಿದ್ದರು ಎನ್ನಲಾಗುತ್ತಿದೆ. ಬಾವಿಗೆ ಆವರಣ ಗೋಡೆಯಿದ್ದು ಗೋಡೆ ಸಮೀಪದಲ್ಲೇ ಜಲ್ಲಿಕಲ್ಲು ರಾಶಿ ಹಾಕಲಾಗಿದೆ. ಅದರ ಮೇಲೇರಿ ಆಟವಾಡುತ್ತಿದ್ದ ಮಕ್ಕಳು ಜಾರಿ ಬಾವಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆಯೆಂದು ಶಂಕಿಸಲಾಗಿದೆ.
ಇಬ್ಬರು ಮಕ್ಕಳ ತಂದೆಯಂದಿರು ಸಹೋದರರಾಗಿದ್ದು ಇಬ್ಬರೂ ಗಲ್ಫ್ನಲ್ಲಿದ್ದಾರೆ. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ ಬಾಲಕರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
Click this button or press Ctrl+G to toggle between Kannada and English